

ಚಿಕ್ಕಮಗಳೂರು: ಎಲ್ಲ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಭಿನ್ನವಾಗಿದ್ದು, ಪೊಲೀಸರು ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿವೃತ್ತ ಎಎಸ್‌ಪಿ ಯೋಗೇಂದ್ರನಾಥ್ ಹೇಳಿದರು.
ನಗರದ ರಾಮನಹಳ್ಳಿಯ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಜರ ಕಾಲದಲ್ಲಿ ಕೊತ್ವಾಲರನ್ನು ನೇಮಿಸಿಕೊಂಡು ಆಡಳಿತ ನಡೆಸಲಾಗುತ್ತಿತ್ತು. ಆದರೆ ಸಂವಿಧಾನ ಜಾರಿಗೆ ಬಂದ ಮೇಲೆ ಪೊಲೀಸ್ ವ್ಯವಸ್ಥೆ ಜಾರಿಗೆ ಬಂದಿದೆ. ಪೊಲೀಸರು ಒಂದು ಕ್ಷಣ ಕೆಲಸ ಮಾಡದಿದ್ದರೆ ಸಮಾಜದಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ ಎಂದರು.
ಕಾನೂನು ರಕ್ಷಣೆ ಮಾಡುವುದೇ ಪೊಲೀಸರ ಕೆಲಸ. ಹೀಗಾಗಿ ಪೊಲೀಸರು ಕಾನೂನಿಗೆ ಗೌರವ ನೀಡಿ ಕೆಲಸ ಮಾಡಬೇಕು. ಹಿರಿಯ ಅಧಿಕಾರಿಗಳ ಆದೇಶವನ್ನು ಚಾಚು ತಪ್ಪದೇ ಪಾಲಿಸಬೇಕು. ಪೊಲೀಸರಿಗೆ ರಜೆ ಎನ್ನುವುದೇ ಇಲ್ಲ . ರುವುದರಲ್ಲೇ ಕೆಲ ಸಮಯ ಕುಟುಂಬಕ್ಕೆ ಮೀಸಲಿಡಬೇಕು. ಜತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಪಿ ವಿಕ್ರಮ್ ಅಮಟೆ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಮಾರಾಟ ಮಾಡುವ ಧ್ವಜಗಳಿಂದ ಬರುವ ಆದಾಯವನ್ನು ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಪೊಲೀಸ್ ಧ್ವಜ ಮಾರಾಟದಿಂದ 25 ಲಕ್ಷ ರೂ. ಆದಾಯ ಬಂದಿತ್ತು. ಅದರಲ್ಲಿ ಶೇ.50ರಷ್ಟು ಹಣವನ್ನು ಕೇಂದ್ರ ನಿಧಿಗೆ ನೀಡಿದ್ದೇವೆ. ಉಳಿದ ಹಣವನ್ನು ಜಿಲ್ಲೆಯ ನಿವೃತ್ತ ಪೊಲೀಸರ ಕಲ್ಯಾಣಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. 2023-24 ನೇ ಸಾಲಿನಲ್ಲಿ 84 ಪೊಲೀಸ್ ಸಿಬ್ಬಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ 2.63 ಲಕ್ಷ ರೂ. ನೀಡಲಾಗಿದೆ. ಇದೇ ಸಾಲಿನಲ್ಲಿ ಮೃತಪಟ್ಟ 24 ಮಂದಿ ನಿವೃತ್ತ ಪೊಲೀಸರ ಅಂತ್ಯಸಂಸ್ಕಾರಕ್ಕೆ 1.60 ರೂ. ನೀಡಲಾಗಿದೆ. ಪ್ರಸ್ತುತ ನಿವೃತ್ತ ಪೊಲೀಸರ ಕಲ್ಯಾಣ ನಿಧಿಯಲ್ಲಿ 26.66 ಲಕ್ಷ ರೂ. ಹಣ ಉಳಿದಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಎಸ್‌ಪಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.