'ಶಾಂತಿಯುತ ಚುನಾವಣೆಗೆ ಪೊಲೀಸ್ ಇಲಾಖೆ ಸಜ್ಜು'

'Police department gearing up for peaceful elections'
Published on

ಮಡಿಕೇರಿ:

ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ರಾಜ್ಯದಲ್ಲಿ ೨ನೇ ಹಂತದ ಚುನಾವಣೆ ನಡೆಯುತ್ತಿದ್ದು, ಕೊಡಗಿನಲ್ಲಿ ಮೊದಲನೇ ಹಂತದಲ್ಲಿ ಶುಕ್ರವಾರ (ಏ.೨೬) ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಗುಜರಾತ್‌ನಿಂದ ಈಗಾಗಲೇ ಶಸ್ತ್ರಪಡೆಯ ೧೯೦ ಪೊಲಿಸ್ ಸಿಬ್ಬಂದಿ ಹೊಂದಿರುವ ೨ ಕಂಪೆನಿ ಕರೆಸಲಾಗಿದೆ. ಗುಲ್ಬರ್ಗಾ ಮತ್ತು ಗದಗ್‌ನಿಂದಲೂ ಪೊಲೀಸರು ಬಂದಿದ್ದಾರೆ. ಕೊಡಗಿನ ಜನ ಕಾನೂನನ್ನು ಗೌರವಿಸುವವರಾಗಿದ್ದು, ಸ್ಥಳೀಯರ ಜತೆ ಗೌರವಯುತವಾಗಿ ವರ್ತಿಸುವಂತೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮಡಿಕೇರಿ ಪೊಲೀಸ್ ಪರೇಡ್ ಗ್ರೌಂಡ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಕ್ಸಲ್ ಪೀಡಿತ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದ್ದು ಎಲ್ಲಾ ಕಡೆಗಳಲ್ಲೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ೧ ಎಸ್.ಪಿ, ೧ ಎ.ಎಸ್.ಪಿ. ೬ ಡಿವೈಎಸ್.ಪಿ. ೧೪ ಇನ್ಸ್ ಪೆಕ್ಟರ್, ೪೫ ಸಬ್ ಇನ್ಸ್ ಪೆಕ್ಟರ್, ೫೯ ಸಹಾಯ ಉಪನಿರೀಕ್ಷಕರು, ೬೭೮ ಪೇದೆ, ೨೮೦ ಗೃಹ ರಕ್ಷಕ ದಳ, ೮ ಡಿ.ಎ.ಆರ್. ತುಕಡಿ ಸೇರಿ ೧೬೦೦ ಸಿಬ್ಬಂದಿ ನಿಯೋಜನೆಯಾಗಿದೆ.

ಗುರುವಾರ (ಏ.೨೫) ಮಸ್ಟರಿಂಗ್ ಕಾರ್ಯ ನಡೆಯಲಿದೆ. ೪೫ ಸೆಕ್ಟರ್ ಮೊಬೈಲ್ ಪಡೆ ಇರುತ್ತದೆ. ಈ ಮೂಲಕ ಆಮಿಷ, ಹಣ ಹಂಚುವುದನ್ನು ತಡೆಗಟ್ಟಲಾಗುವುದು. ಫ್ಲೈಯಿಂಗ್ ಸ್ಕ್ವಾಡ್ ಕೂಡ ಇರುತ್ತದೆ. ಒಳ್ಳೆಯ ಸಮಾಜ ನಿರ್ಮಾಣಕ್ಕೆ, ನಿರ್ಭೀತಿಯಿಂದ ಮತದಾನ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೊಲಿಸ್ ಸಿಬ್ಬಂದಿಗೆ ಎಲ್ಲಾ ಕಡೆಗಳಲ್ಲೂ ಉತ್ತಮ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಎಸ್.ಪಿ. ಸುಂದರ್ ರಾಜ್ ಇದ್ದರು. ಇದಕ್ಕೂ ಮೊದಲು ಪೊಲೀಸ್ ಅಧಿಕಾರಿಗಳಿಗೆ ಸ್ಥಳ ಮತ್ತು ಜವಾಬ್ದಾರಿ ಹಂಚಿಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net