

ಶಿವಮೊಗ್ಗ: ಕಾಂಗ್ರೆಸ್ ಕಚೇರಿಗಳೇ ಗಲಭೆ ಸೃಷ್ಟಿಸುವ ಕೇಂದ್ರಗಳಾಗಿದ್ದು, ಅಲ್ಲಿಗೆ ವಿಶೇಷ ಕಾರ್ಯಪಡೆ ಬೇಕಿದೆ. ಧರ್ಮ, ದೇಶ ಮತ್ತು ಸಂವಿಧಾನ ರಕ್ಷಣೆ ಮಾಡದಿದ್ದರೆ ಮುಂದೊಂದು ದಿನ ಹಿಂದುಗಳೇ ರಕ್ಷಣೆಗೆ ಮುಂದಾಗುವರು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದ ಗೂಂಡಾಗಿರಿ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಪರಿಸ್ಥಿತಿ ನಿಯಂತ್ರಿಸುವಂತೆ ಸೂಚಿಸಿದ್ದಾರೆ. ಗೃಹ ಸಚಿವ ಡಾ. ಜಿ.ಪರಮೇಶ್ವರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೋಮು ಗಲಭೆ ತಡೆಯಲು ವಿಫಲರಾಗಿದ್ದಾರೆ ಎಂದೇ ಅರ್ಥ. ಹಾಗಾಗಿ ಇಬ್ಬರು ಸಚಿವರನ್ನೂ ಸಂಪುಟದಿಂದ ಕಿತ್ತೊಗೆಯಬೇಕು. ಬಿ.ಕೆ.ಹರಿಪ್ರಸಾದ್ ಹಿಂದುತ್ವ ವಿರೋಧಿಯಾಗಿದ್ದು, ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ತಡೆಯುವ ಜವಾಬ್ದಾರಿ ನೀಡಿರುವುದು ತೋಳಕ್ಕೆ ಕುರಿ ಮರಿ ಕೊಟ್ಟಂತಾಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್‌ನ ಮನಸ್ಥಿತಿ ಬದಲಾಗುವವರೆಗೂ ಮುಸ್ಲಿಂ ಗೂಂಡಾಗಳು ಬದಲಾಗುವುದಿಲ್ಲ. ಸಿಎಂ ಆದಿಯಾಗಿ ಕಾಂಗ್ರೆಸ್ ನಾಯಕರು ಮೊದಲು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದು ಎಂಬ ಧೋರಣೆ ಹೊಂದಿದ್ದಾರೆ ಎಂದು ಕಿಡಿಕಾರಿದರು.