ಮಾನವ-ಕಾಡುಪ್ರಾಣಿಗಳ ಸಂಘರ್ಷ ತಪ್ಪಿಸಲು ಪೊಲೀಸ್ ಇಲಾಖೆ ಕ್ರಮ

D 23 MDG
ಮೂಡಿಗೆರೆಯಲ್ಲಿ ಆಯೋಜಿಸಿದ್ದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಬಿ.ಎಂ.ಶಂಕರ್ ಮಾತನಾಡಿದರು. ಸಿಪಿಐ ಸೋಮೇಗೌಡ, ಪಿಎಸ್‌ಐಗಳಾದ ಆದರ್ಶ, ಕಿಶೋರ್, ಬಿ.ಎಸ್.ಜಯರಾಂ, ಬಿ.ಎಂ.ಶಂಕರ್ ಇತರರಿದ್ದರು.
Published on

ಮೂಡಿಗೆರೆ: ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ರೈತರ ಬೆಳೆ ನಷ್ಟವಾಗುತ್ತಿದೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದು ಸಿಪಿಐ ಸೋಮೇಗೌಡ ಹೇಳಿದರು.

ಬುಧವಾರ ತಾಪಂನಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿ ಮಾಡಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಠಾಣೆಗೆ ಭೇಟಿ ನೀಡುವ ಸಾರ್ವಜನಿಕರನ್ನು ನಗುಮುಖದಿಂದ ಸ್ವಾಗತಿಸುವಂತೆ ಎಲ್ಲ ಠಾಣೆಗಳಿಗೂ ಸೂಚನೆ ನೀಡಲಾಗಿದೆ ಎಂದರು.
ದಾರಿ ತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರಲು ಯುವಕರ ದಿನ ಆಚರಿಸಲು ಚಿಂತನೆ ನಡೆಸಲಾಗಿದೆ. ಜನರ ಸಮಸ್ಯೆಗಳಿಗೆ ಇಲಾಖೆ ಸದಾ ಸ್ಪಂದಿಸಲಿದೆ. ದಿನದ 24 ಗಂಟೆಯೂ ಜನ ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಇತ್ತೀಚೆಗೆ ತಾಲೂಕಿನಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಜನವರಿಯಿಂದ ಈವರೆಗೆ ಅಪಘಾತದಲ್ಲಿ 15 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ಹೆಚ್ಚಾಗಲು ಗುಂಡಿಬಿದ್ದ ರಸ್ತೆಗಳು ಕಾರಣ ಎಂದು ತಿಳಿಸಿದರು.
ಸಿವಿಲ್ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲಾಗದೆ ಸಂಭವಿಸಿದ ಗಲಭೆಯಿಂದ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಸಿವಿಲ್ ವ್ಯಾಜ್ಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡಲ್ಲಿ ಸಮಯ ಮತ್ತು ಹಣ ಉಳಿತಾಯವಾಗುತ್ತದೆ, ಪ್ರಾಣ ಹಾನಿ ತಪ್ಪುತ್ತದೆ ಎಂದು ತಿಳಿಸಿದರು.
ಪಿಎಸ್‌ಐಗಳಾದ ಆದರ್ಶ, ಕಿಶೋರ್, ಮುಖಂಡರಾದ. ಫಿಶ್ ಮೋಣು, ಮನೋಜ್, ಅಬ್ದುಲ್ ರಹಿಮಾನ್, ಚಂದ್ರು ಒಡೆಯರ್, ಫ್ರಾನ್ಸಿಸ್, ಶಿವಕುಮಾರ್, ಅರುಣ್, ಗಣೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net