ಕೃಷಿ ಬೆಳೆಯ ನಡುವೆ ಗಾಂಜಾ ಗಿಡಗಳನ್ನು ಬೆಳೆದ ಚಾಲಾಕಿ ರೈತ, ಅಕ್ರಮ ಭೇದಿಸಿದ ಖಾಕಿ ಪಡೆ

IMG-20240902-WA0019.jpg
Published on


ಚಿಕ್ಕಬಳ್ಳಾಪುರ: ಕೃಷಿ ಬೆಳೆಯ ನಡುವೆ ಅಕ್ರಮವಾಗಿ ಮಾದಕ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು 1.೦5 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ-ದಾಸರಹಳ್ಳಿಯ ಜನಮಡುಗಪ್ಪ ಅಲಿಯಾಸ್ ಲಂಬು (55) ಆರೋಪಿ. ಕೃಷಿ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ. ಇದರ ಬಗೆಗಿನ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು 4.70 ಕೆ.ಜಿ.ಗಾಂಜಾ ಮಾಲನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸಿಂ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪಿ.ಮುರಳೀಧರ್, ಸಿಪಿಐ ಎಂ.ಶ್ರೀನಿವಾಸ, ದಿಬ್ಬೂರಹಳ್ಳಿ ಠಾಣೆಯ‌ ಪಿಎಸ್ಐ ಶ್ಯಾಮಲಾ ನೇತೃತ್ವದ ತಂಡವು ಕಾರ್ಯಾಚರಣೆ ಕೈಗೊಂಡಿದ್ದು ಅಕ್ರಮ ಯಶಸ್ವಿ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ ಚೌಕ್ಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲಿನಿಂದಲೂ ಜಿಲ್ಲಾದ್ಯಂತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಬಗ್ಗೆ ವ್ಯಾಪಕ ದೂರುಗಳು ಹೆಚ್ಚಿಗೆ ಕೇಳಿ ಬರುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳು ಸೇರಿದಂತೆ ಯುವ ದುಶ್ಚಟಗಳ ದಾಸರಾಗುತ್ತಿದ್ದಾರೆ. ಅಕ್ರಮ ಸಾಗಾಣೆಯ ನಡುವೆ ಗಾಂಜಾ ಗಿಡಗಳನ್ನು ಬೆಳೆಯುವುದು ದೊಡ್ಡ ತಲೆನೋವಾಗಿ ಪರಿಣಿಮಿಸಿದೆ.‌ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ದುಶ್ಚಟಗಳನ್ನು ಕಟ್ಟುನಿಟ್ಟಾಗಿ ತಡೆಯಲು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net