

ಮಂಗಳೂರು: ಸಿಸಿಬಿ ಪೊಲೀಸರೇ ವಂಚನೆ ಆರೋಪಿಗಳ ಕಾರು ಮಾರಾಟ ಅವ್ಯವಹಾರದಲ್ಲಿ ಪಾಲ್ಗೊಂಡ ವಿಚಾರದಲ್ಲಿ ವಿಚಾರಣಾಧಿಕಾರಿಯಾಗಿರುವ ಮಂಗಳೂರು ಡಿಸಿಪಿ(ಕಾನೂನು ಸುವ್ಯವಸ್ಥೆ)ನೀಡಿರುವ ಮಧ್ಯಂತರ ವರದಿ ಪೊಲೀಸ್ ಆಯುಕ್ತರ ಮೂಲಕ ಎಡಿಜಿಪಿಗೆ ಸಲ್ಲಿಕೆಯಾಗಿದೆ.
ಸಿಸಿಬಿ ಪೊಲೀಸರು ನಡೆಸಿದ್ದಾರೆ ಎನ್ನಲಾದ ಹಣದ ವ್ಯವಹಾರ ಜಾಲತಾಣಗಳಲ್ಲಿ ವೈರಲ್ ಆಗಿರುವುದರಲ್ಲಿ ಸತ್ಯಾಂಶ ಇರುವುದನ್ನು ವಿಚಾರಣಾ ವರದಿಯಲ್ಲಿ ಬೊಟ್ಟು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಸಿಸಿಬಿ ಎಸ್‌ಐಹಾಗೂ ಸಿಬ್ಬಂದಿ ಸೇರಿಕೊಂಡು ಆರೋಪಿಗಳ ಕಾರು ಮಾರಾಟ ಮಾಡಿ ಅವ್ಯವಹಾರ ನಡೆಸಿರುವುದನ್ನು ಮಧ್ಯಂತರ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಈ ಬಗ್ಗೆ ಜಾಲತಾಣಗಳಲ್ಲಿ ಆರೋಪ ವ್ಯಕ್ತವಾಗಿದ್ದು, ಇದನ್ನು ಅನುಸರಿಸಿ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಆರೋಪದ ವಿವಿಧ ಮಗ್ಗುಲಲ್ಲಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಹಣದ ವಹಿವಾಟು ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದನ್ನು ವಿಚಾರಣಾಧಿಕಾರಿಗಳು ಕಂಡುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಡಿಜಿಪಿ ಅವರು ಒಂದು ವಾರದಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ವಿಚಾರಣಾಧಿಕಾರಿ ವಿನಯ ಗಾಂವ್ಕರ್ ಅವರು ಸೋಮವಾರ ನಗರ ಪೊಲೀಸ್ ಕಮಿಷನರ್‌ಗೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಆರೋಪಲ್ಲೆ ಗುರಿಯಾದ ಅಧಿಕಾರಿಗೆ ಸಿಎಂ ಪದಕ?: ಅವ್ಯವಹಾರ ನಡೆಸಿದ ಆರೋಪದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಿಸಿಬಿ ಅಧಿಕಾರಿ ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಪದಕ ಸ್ವೀಕರಿಸಿರುವುದಾಗಿ ತಿಳಿದು ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಸಾಧನೆಗಾಗಿ ಅವರಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿತ್ತು. ಈ ಮಧ್ಯೆ ಅವ್ಯವಹಾರದ ಆರೋಪ ಸುದ್ದಿಯಾಗುತ್ತಿದ್ದಂತೆ ಎಡಿಜಿಪಿ ಅವರಿಂದ ವಿಚಾರಣೆಗೆ ಆದೇಶವಾಗಿತ್ತು. ಈ ಮಧ್ಯೆಯೂ ಅಧಿಕಾರಿ ಬೆಂಗಳೂರಿಗೆ ತೆರಳಿ ಸಿಎಂ ಪದಕ ಸ್ವೀಕರಿಸಿದ್ದಾರೆ. ಮಧ್ಯಂತರ ವಿಚಾರಣಾ ವರದಿಯಲ್ಲಿ ಆರೋಪದಲ್ಲಿ ಸತ್ಯಾಂಶವಿದೆ ಎಂದು ಉಲ್ಲೇಖ ಮಾಡಿದ ಕಾರಣ ಆರೋಪಕ್ಕೆ ಗುರಿಯಾಗಿಯಾಗಿರುವ ಸಿಸಿಬಿ ಪೊಲೀಸರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.