

ಕಲಬುರಗಿ: ತಾಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೊರಬಾ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮಾಡಬೂಳ ಠಾಣೆಯ ಮೂವರು ಪೊಲೀಸರನ್ನು ಎಸ್ಪಿ ಅಮಾನತು ಮಾಡಲಾಗಿದೆ. ಮುಖ್ಯಪೇದೆ ಜಗನ್ನಾಥ, ಪೊಲೀಸ್ ಪೇದೆಗಳಾದ ಮಾಳಗೊಂಡ, ರಮೇಶ ಅವರನ್ನು ಅಮಾನತು ಮಾಡಿ ಎಸ್ಪಿ ಅಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ.
ಬೀಟ್ ಕಾರ್ಯ ಸರಿಯಾಗಿ ನಿರ್ವಹಿಸದಕ್ಕೆ ಮುಖ್ಯಪೇದೆ ಜಗನ್ನಾಥರನ್ನು, ಯುವಕ ದೇವಾನಂದ ಕೊರಬಾ ಅವರನ್ನು ಪಿಎಸ್‌ಐ ಠಾಣೆಯಲ್ಲಿ ಇಲ್ಲದಿರುವುದು ಗೊತ್ತಿದ್ದರೂ ಕರೆಸಿಕೊಂಡು ಬೇಜವಾಬ್ದಾರಿತನ ತೋರಿದ್ದಕ್ಕೆ ಪೇದೆಗಳಾದ ಮಾಳಗೊಂಡ ಮತ್ತು ರಮೇಶರನ್ನು ಅಮಾನತು ಮಾಡಿ, ಆದೇಶಿಸಿದ್ದಾರೆ.
ಕೋಲಿ ಸಮಾಜ ಸ್ವಾಗತ: ದೇವಾನಂದ ಕೊರಬಾ ಸಾವಿನ ಪ್ರಕರಣದ ಹಿನ್ನಲೆಯಲ್ಲಿ ಪೊಲೀಸರನ್ನು ಅಮಾನತು ಮಾಡಿರುವ ಕ್ರಮಕ್ಕೆ ಜಿಲ್ಲಾ ಕೋಲಿ, ಕಬ್ಬಲಿಗ ಸಮನ್ವಯ ಸಮಿತಿ ಸ್ವಾಗತಿಸಿದ್ದು, ಶೀಘ್ರ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬರಲಿದೆ ಎಂದು ಕೋಲಿ ಸಮಾಜದ ಹೋರಾಟ ಸಮಿತಿ ಸಂಚಾಲಕ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಸೇರಿ ಇತರರು ತಿಳಿಸಿದ್ದಾರೆ.