

ಚಿಂಚೋಳಿ (ಕಲಬುರಗಿ): ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಪೊಲೀಸರು ಭ್ರಷ್ಟಾಚಾರ, ಡೀಲ್ನಲ್ಲಿ ತೊಡಗಿರುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಆಳಂದ ತಾಲೂಕಿನಲ್ಲಿ ಅಕ್ಕಿ ಕಳ್ಳರ ಜತೆ ಕೈ ಜೋಡಿಸಿರುವ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಪೊಲೀಸ್ ಪೇದೆ ಲಂಚಕ್ಕೆ ಕೈ ಒಡ್ಡಿ, ಸಾಕ್ಷಿ ಸಮೇತ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಟನೆ ನಡೆದಿದೆ.
ಜಾಮೀನಿನ ಮೇಲೆ ಇರುವ ವ್ಯಕ್ತಿ ಬಳಿ ಮೂರು ಸಾವಿರ ರೂ. ಫೋನ್ ಪೇ ಮೂಲಕ ಲಂಚ ಪಡೆದ ಪೊಲೀಸ್ ಪೇದೆಯೂ ಸಾಕ್ಷಿ ಸಹಿತ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸುಲೇಪೇಟ್ ಠಾಣೆಯ ಪೊಲೀಸ್ ಪೇದೆ ಅನೀಲ ಲೋಕಾಯುಕ್ತ ಬಲೆಗೆ ಬಿದ್ದವ.
ತಾಲೂಕಿನ ಗಡಿಕೇಶ್ವಾರ ಗ್ರಾಮದ ಚಂದ್ರಕಾಂತ ರಂಗನೂರಗೆ ಜಾಮೀನು ನೀಡಿ, ಪ್ರತಿ ತಿಂಗಳು ಸುಲೇಪೇಟ್ ಠಾಣೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಸುಲೇಪೇಟ್ ಪೊಲೀಸ್ ಠಾಣೆ ರೈಟರ್ ಅನೀಲ ಹಾಜರಾತಿ ನಮೂದಿಸಲು ಪ್ರತಿ ಭಾನುವಾರ ಠಾಣೆಗೆ ಹಾಜರಾಗುವಂತೆ ಸತಾಯಿಸುತ್ತಿದ್ದ. ಇಲ್ಲದಿದ್ದರೆ ನಿನ್ನ ಜಾಮೀನು ರದ್ದು ಮಾಡಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದ. ವಾರಕ್ಕೊಮ್ಮೆ ಬರುವುದು ತಪ್ಪಿಸಿಕೊಳ್ಳಲು ಚಂದ್ರಕಾಂತನೂ ಮಧ್ಯವರ್ತಿ ಕೃಷ್ಣ ಅವರ ಮೊಬೈಲ್ಗೆ ಮೂರು ಸಾವಿರ ರೂ. ಫೋನ್ ಪೇ ಮೂಲಕ ವರ್ಗಾವಣೆ ಮಾಡಿಕೊಂಡಿದ್ದು, ಸಾ ದೂರಿನಂತೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅನೀಲನನ್ನು ಬಂಧಿಸಿದ್ದಾರೆ. ತನಿಖಾಧಿಕಾರಿ ರವಿಕುಮಾರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.