ಪೊಲೀಸ್​ ಆಯುಕ್ತರ ನಡೆಗೆ ಬೆಲ್ಲದ ಗರಂ

18 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹು-ಧಾ ಅವಳಿನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಹಿನ್ನೆಲೆಯಲ್ಲಿ ಗೃಹಮಂತ್ರಿ ಹಾಗೂ ನಗರ ಪೊಲೀಸ್​ ಆಯುಕ್ತರಿಗೆ ಪತ್ರ ಬರೆದಿದ್ದೆ. ಆದರೆ 8 ದಿನವಾದರೂ ಯಾವುದೇ ವಿಚಾರಣೆ ನಡೆಸಿಲ್ಲ. ಇದೀಗ ಪೊಲೀಸ್​ ಆಯುಕ್ತರು ಪತ್ರದ ಮಾಹಿತಿಯೇ ಇಲ್ಲ ಎಂದು ಹೇಳುತ್ತಿರುವುದು ಬೇಜವಾಬ್ದಾರಿ ಹೇಳಿಕೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಜಾಗೃತ ನಾಗರಿಕರು ಕರೆ ಮಾಡಿ ಅಪರಿಚಿತ ವ್ಯಕ್ತಿಗಳ ಓಡಾಟದ ಮಾಹಿತಿ ನೀಡಿದ್ದರು. ಅವರು ಪಾಕಿಸ್ತಾನಿಗಳಂತೆ ಕಾಣುತ್ತಾರೆ ಎಂಬ ಕಾರಣಕ್ಕೆ ಇದೊಂದು ಸೂಕ್ಷ್ಮ ವಿಚಾರ ಎಂದು ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದೆ. ಆದರೆ ಆಯುಕ್ತರು ತನಿಖೆ ನಡೆಸಿ ನನಗೂ ಹೇಳಿಲ್ಲ. ತನಿಖೆ ನಡೆಸುವ ಮನಸ್ಥಿತಿ ಅವರಿಗೆ ಇಲ್ಲವಾದಂತಿದೆ. ಇದು ಇಂದಿನ ಕಾಂಗ್ರೆಸ್​ ಸರ್ಕಾರದ ಆಡಳಿತ ವೈಖರಿಯಾಗಿದೆ ಎಂದು ದೂರಿದರು.

ದೇಶ ಘಾತುಕ ಶಕ್ತಿಗಳಿಗೆ ನಮ್ಮ ಬ್ರದರ್ಸ್​ ಎಂದು ಸರ್ಕಾರ ಹೇಳುತ್ತಿದೆ. ಅದರಂತೆ ಕೆಳ ಹಂತದ ಅಧಿಕಾರಿಗಳ ಮನಸ್ಥಿತಿಯೂ ಇದಾಗಿದೆ. 7-8 ಜನ ಗುಂಪುಗಳಲ್ಲಿ ಕಾಣುತ್ತಿದ್ದಾರೆ. ಅವರ ಚಟುವಟಿಕೆಗಳ ಬಗ್ಗೆ ನಮಗೆ ಮಾಹಿತಿ ಇಲ್ಲವಾಗಿದೆ. ಅದನ್ನು ಪೊಲೀಸರು ತನಿಖೆ ಮಾಡಬೇಕು. ಆದರೆ ಪೊಲೀಸರು ಬರೀ ಕಲೆಕ್ಷನ್​ ದಂಧೆಯಲ್ಲಿ ಬ್ಯುಸಿಯಾಗಿದ್ದಾರೆ. ಸಮಾಜ ಘಾತುಕ ಶಕ್ತಿಗಳಿಂದ ಹಣ ಪಡೆದು ಮೇಲಿನವರಿಗೆ ಮುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆ. ನಿಜವಾದ ಕಾನೂನು-ಸುವ್ಯವಸ್ಥೆ ಕಾಪಾಡುವ ಕೆಲಸದಲ್ಲಿ ಅವರಿಗೆ ಆಸಕ್ತಿ ಇಲ್ಲವಾಗಿದೆ. 8 ದಿನವಾದರೂ ಒಬ್ಬರನ್ನೂ ತನಿಖೆ ಮಾಡಿಲ್ಲ. ನನಗೂ ಉತ್ತರ ಬಂದಿಲ್ಲ. ಗೃಹ ಮಂತ್ರಿಗಳ ಕಚೇರಿಗೆ ಪತ್ರ ಮುಟ್ಟಿಸುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಏನೇ ಅನಾಹುತವಾದರೂ ರಾಜ್ಯ ಸರ್ಕಾರ ಕಾರಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net