

ಮಂಗಳೂರು : ನಗರದ ಬಲ್ಮಠದ ಪಬ್ ಮೇಲೆ ಬಜರಂಗದಳ ದಾಳಿ ಘಟನೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, ನಗರದಲ್ಲಿ ಯಾವುದೇ ಪಬ್ ಅಟ್ಯಾಕ್ , ದೈಹಿಕ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಬಲ್ಮಠದ ಪಬ್ ಆವರಣಕ್ಕೆ ಬಂದು ಪರಿಶೀಲನೆ ನಡೆಸಿದ ಕಮಿಷನರ್ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಹತ್ತು ಹನ್ನೆರೆಡು ಮಂದಿ ಪಬ್ ಮುಂಭಾಗದಲ್ಲಿ ಜಮಾಯಿಸಿದ್ದರು. ಪಬ್ ಒಳಗೆ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಅವರದ್ದಾಗಿತ್ತು. ಈ ಬಗ್ಗೆ ಬೌನ್ಸರ್ ಜೊತೆ ಯುವಕರು ಮಾತನಾಡಿದ್ದರು. ಬೌನ್ಸರ್ ಬಳಿಕ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ಅಪ್ರಾಪ್ತ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾರೆ. ಇಲ್ಲಿ ಯಾವುದೇ ಅಟ್ಯಾಕ್ ಆಗಲೀ, ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ ಎಂದು ಹೇಳಿದ್ದಾರೆ.
ಸಿಸಿಟಿವಿ ಪರಿಶೀಲನೆ ನಡೆಸಲಾಗುವುದು. ಪಬ್ ಮಾಲೀಕ ಮುಂಬೈ ಮೂಲದವರಾಗಿದ್ದು ಅವರಲ್ಲಿಯೇ ಸಿಸಿಟಿವಿ ಪಾಸ್ ವರ್ಡ್ ಇದೆ ಎಂದು ಸಿಬಂದಿ ಮಾಹಿತಿ ನೀಡಿದ್ದಾರೆ. ಅವರನ್ನು ಸಂಪರ್ಕಿಸಲಾಗಿದೆ. ಇಲ್ಲಿ ಏನೇನು ಕಾನೂನು ವಿರೋಧಿ ಕೃತ್ಯ ಆಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಬಗ್ಗೆ ಕಾಲೇಜಿನ ಆಡಳಿತದ ಜೊತೆ ಸಂಪರ್ಕ ಮಾಡಿ, ಅವರನ್ನು ಕರೆಸಿ ಹೇಳಿಕೆ ಪಡೆಯಲಾಗುವುದು. ಏನಾದ್ರೂ ಹಲ್ಲೆಯಂತಹ ಘಟನೆ ನಡೆದಿದ್ದರೆ, ಕ್ರಮ ಜರುಗಿಸುತ್ತೇವೆ. ಕೆಲವೊಂದು ಪಬ್, ರೆಸ್ಟೋರೆಂಟ್ ಗಳಲ್ಲಿ 21 ವರ್ಷದ ಒಳಗಿನವರಿಗೆ ಲಿಕ್ಕರ್ ಸರ್ವ್ ಮಾಡಲಾಗುತ್ತಿದೆ ಎನ್ನುವ ಮಾಹಿತಿಯಿತ್ತು. ಅದರ ಬಗ್ಗೆ ಪೊಲೀಸ್ ತನಿಖೆ ನಡೆಸಲಾಗುವುದು. ಇತ್ತೀಚೆಗೆ ಎರಡು ತಿಂಗಳ ಹಿಂದೆ ಪಬ್ ಒಂದಕ್ಕೆ ದಾಳಿ ನಡೆಸಿ, ಅಕ್ರಮ ಇರುವುದನ್ನು ಪತ್ತೆಮಾಡಿ ಪ್ರಕರಣ ದಾಖಲಿಸಲಾಗಿತ್ತು. ಹಾಗಂತ, ಯಾವುದೇ ಖಾಸಗಿ ವ್ಯಕ್ತಿಗಳು, ಸಂಘಟನೆಗಳು ಪಬ್ ಒಳಗೆ ಬಂದು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ ಎಂದರು.