ಮಕ್ಕಳ ಕಳ್ಳರ ವದಂತಿಗೆ ಕಿವಿಗೊಡಬೇಡಿ; ಪೊಲೀಸ್​ ಆಯುಕ್ತರ ಮನವಿ

Children Thievs.jpg d
Published on

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್​ ಕಮಿಷನರೇಟ್​ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳತನದಂಥ ಯಾವುದೇ ಪ್ರಕರಣ ವರದಿಯಾಗಿಲ್ಲ. ಹಾಗಾಗಿ, ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯನ್ನು ಯಾರೂ ನಂಬಬಾರದು ಎಂದು ಹು&ಧಾ ಪೊಲೀಸ್​ ಆಯುಕ್ತ ಲಾಭೂರಾಮ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದ ಬೇರೆ ರಾಜ್ಯ ಹಾಗೂ ಬೇರೆ ದೇಶಗಳ ವಿಡಿಯೋಗಳನ್ನು ಕೆಲವರು ಹರಿಬಿಡುತ್ತಿದ್ದಾರೆ. ಇದರಿಂದ ಆತಂಕಗೊಂಡು ಸಾರ್ವಜನಿಕರು ಅಮಾಯಕರಿಗೆ ಥಳಿಸಿದ ಟನೆಗಳು ಕೆಲವೆಡೆ ನಡೆದಿವೆ.
ನಿಮ್ಮ ಸುತ್ತಮುತ್ತ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತುರ್ತು ಸಹಾಯವಾಣಿ 112ಗೆ ಕರೆ ಮಾಡಿದರೆ ನಮ್ಮ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿ ಸಹಾಯ ಮಾಡುತ್ತಾರೆ. ಕೂಲಂಕಶವಾಗಿ ವಿಚಾರಿಸಿ ಅಗತ್ಯ ಕಾನೂನು ಕ್ರಮ ಜರುಗಿಸುತ್ತಾರೆ. ಸಾರ್ವಜನಿಕರು ಆತಂಕಗೊಂಡು ಅಮಾಯಕರಿಗೆ ತೊಂದರೆ ಕೊಡುವುದಾಗಲೀ, ಹಲ್ಲೆ ಮಾಡುವುದಾಗಲೀ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು. ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net