

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರಿನಲ್ಲಿ ಭಾನುವಾರ ರಾತ್ರಿ ವಿಜಯೋತ್ಸವ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಘಟನೆಗೆ ಪ್ರಚೋದನಾಕಾರಿ ಘೋಷಣೆ ಮುಖ್ಯ ಕಾರಣವಾಗಿದೆ. ಹಾಗಾಗಿ ಇತ್ತಂಡಗಳ ವಿರುದ್ಧ ಪ್ರರಕಣ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ 30-40 ಮಂದಿ ಇದ್ದರು. ಮಾರ್ಗಮಧ್ಯೆ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ. ಅದಾದ ಮೇಲೆ ಒಂದು ಬೈಕ್‌ನಲ್ಲಿ ಮೂವರು ಯುವಕರು ವಾಪಸ್ ತೆರಳಿ ಘೋಷಣೆ ಕೂಗಿದ್ದಾರೆ. ಆಗ ಅಲ್ಲಿದ್ದ 20 ಮಂದಿ ಸೇರಿ, ಕೆಲವರು ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಒಬ್ಬಿಬ್ಬರು ಬಾರ್ ಬಳಿ ಚೂರಿಯಿಂದ ಇರಿದಿದ್ದು, ಇದರಿಂದ ಒಬ್ಬನ ಹೊಟ್ಟೆಗೆ, ಇನ್ನೊಬ್ಬನ ಬೆನ್ನಿಗೆ ಗಾಯವಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಯುಕ್ತರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಭಾರತ್ ಮಾತಾ ಕಿ ಜೈ’ ಘೋಷಣೆ ಹಾಕಿರುವುದಕ್ಕೆ ಚೂರಿ ಇರಿತ ನಡೆದಿಲ್ಲ. ಬದಲಾಗಿ ಮೆರವಣಿಗೆಯಲ್ಲಿ ಆಟೋರಿಕ್ಷಾ ನಿಲ್ದಾಣದ ಬಳಿ ಪಾಕಿಸ್ತಾನದೊಂದಿಗೆ ಸಂಬಂಧ ಕಲ್ಪಿಸಿ ಘೋಷಣೆಗಳನ್ನು ಕೂಗಿದ್ದಾರೆ. ‘ನೀವು ಪಾಕಿಸ್ತಾನದ ಪರ ಇದ್ದೀರಿ, ಮೋದಿ ವಿರೋಧಿಗಳು..’ ಎಂಬ ಅರ್ಥದ ಆಕ್ಷೇಪಾರ್ಹ ಘೋಷಣೆ ಕೂಗಿದ್ದರು. ಇದು ಸಾಮಾಜಿಕ ಜಾಲತಾಣದ ಮೂಲಕ ಮುಸ್ಲಿಂ ಸಮುದಾಯದವರನ್ನು ತಲುಪಿ ಇದರಿಂದ ಪ್ರಚೋದನೆಗೊಂಡ ಕೆಲವರು ಚೂರಿಯಿಂದ ಇರಿದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.
6 ಮಂದಿಯ ಬಂಧನ: ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಘೋಷಣೆ ಕೂಗಿದವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಘೋಷಣೆ ಕೂಗಿದವರ ಆರೋಪಿಗಳ ಪೈಕಿ ಓರ್ವ ಚೂರಿ ಇರಿತಕ್ಕೊಳಗಾದವನು. ಚೂರಿ ಇರಿದ ಆರೋಪಿಗಳ ಪೈಕಿ ಓರ್ವ ರೌಡಿಶೀಟರ್. ಆತ ಮಸೀದಿ ಬಳಿಯಲ್ಲಿಯೇ ಇದ್ದ. ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ರೌಡಿಶೀಟರ್ ಪಾಕೆಟ್ ಚೂರಿಯನ್ನು ಇಟ್ಟುಕೊಂಡಿದ್ದನೆಂದು ಗೊತ್ತಾಗಿದೆ. ರೌಡಿಶೀಟರ್ ತಲೆಮರೆಸಿಕೊಂಡಿದ್ದಾನೆ ಎಂದು ಆಯುಕ್ತರು ತಿಳಿಸಿದ್ದಾರೆ.
3 ತಂಡಗಳ ರಚನೆ: ಹಲ್ಲೆ ನಡೆಸಿದವರಲ್ಲಿ 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಚೂರಿಯಿಂದ ಹಲ್ಲೆ ನಡೆಸಿದವನು ರೌಡಿ ಶೀಟರ್ ಆಗಿದ್ದು, ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ ಇನ್ನಷ್ಟು ಮಂದಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಇದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಇನ್ನೊಂದೆಡೆ ಪ್ರಚೋದನಕಾರಿ ಘೋಷಣೆ ಕೂಗಿದ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅನುಪಮ್ ಅಗರ್‌ವಾಲ್ ತಿಳಿಸಿದರು.
ದಾಖಲೆ ಪರಿಶೀಲನೆ: ಮೆರವಣಿಗೆ ವೇಳೆ ಇಬ್ಬರು ಪೊಲೀಸ್ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಶಾಂತಿಯುತ ಮೆರವಣಿಗೆಗೆ ಗರಿಷ್ಠ ಪ್ರಯತ್ನ ನಡೆಸಿದ್ದಾರೆ. ಮೆರವಣಿಗೆ ಮುಗಿದ ಅನಂತರ ಘಟನೆ ನಡೆದಿದೆ. ಅನುಮತಿ ವೇಳೆ ನಿಗದಿಗೊಳಿಸಿದ ಅವಧಿಯನ್ನು ಮೀರಿ ಮೆರವಣಿಗೆ ನಡೆಸಲಾಗಿದೆಯೇ ಎಂಬುದನ್ನು ಕೂಡ ಪರಿಶೀಲನೆ ನಡೆಸಲಾಗುವುದು. ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವ ಬಗ್ಗೆಯೂ ಸಿಸಿ ಕೆಮರಾ ದಾಖಲೆಗಳನ್ನು ಸಂಗ್ರಹಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಎಲ್ಲಾ ಠಾಣೆಗಳಲ್ಲಿ ಶಾಂತಿ ಸಭೆ: ಕಳೆದ 12 ತಿಂಗಳುಗಳಿಂದ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ ಚುನಾವಣೆಯ ಫಲಿತಾಂಶದ ಅನಂತರ ಏಕಾಏಕಿ ಮೂರು ಘಟನೆಗಳು ನಡೆದಿವೆ. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶಾಂತಿ ಕಾಪಾಡುವುದಕ್ಕಾಗಿ ಈಗಾಗಲೇ ಕೊಣಾಜೆಯಲ್ಲಿ ಎಲ್ಲ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಬುಧವಾರದಿಂದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಾಗುವುದು. ರಾತ್ರಿ ವೇಳೆ ವಾಹನ ತಪಾಸಣೆಯನ್ನು ಕೂಡ ಬಿಗಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಪೊಲೀಸ್ ಆಯುಕ್ತರು ಹೇಳಿದರು.
ಕೋಮು ಶಕ್ತಿಗಳ ಮೆಲೆ ನಿಗಾ: ಕಮಿಷನರೆಟ್ ವ್ಯಾಪ್ತಿಯಲ್ಲಿ ಚುನಾವಣೆ ಸಂದರ್ಭದಲ್ಲಿ 1,300ಕ್ಕೂ ಅಧಿಕ ಮಂದಿಯಿಂದ ಬಾಂಡ್ ಪಡೆದುಕೊಳ್ಳಲಾಗಿದೆ. 75 ಮಂದಿಯನ್ನು ಗಡಿಪಾರು ಮಾಡಲಾಗಿತ್ತು. 8 ಮಂದಿ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿತ್ತು. ಗಡಿಪಾರು ಮಾಡಿರುವುದು, ಗೂಂಡಾ ಕಾಯಿದೆ ಹಾಕಿರುವ ಪ್ರಮಾಣ ರಾಜ್ಯದಲ್ಲೇ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅಧಿಕ. ಕೋಮುಶಕ್ತಿಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯಾ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.