ಪೊಲೀಸ್‌ ಸಂಸ್ಮರಣ ದಿನಾಚರಣೆ

police-day-scaled
Published on

ಕಾರವಾರ: ಸಾರ್ವಜನಿಕರ ರಕ್ಷಣೆಗಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಪೊಲೀಸರ ಕರ್ತವ್ಯವು ಇತರರಿಗೆ ಮಾದರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಹೇಳಿದರು.
ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಸ್ಮಾರಕಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಸೇನಾ ಪಡೆಗಳು ಯುದ್ದಕಾಲದಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದರೆ, ಪೊಲೀಸರು ದೇಶದ ಆಂತರಿಕ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂವಿಧಾನವು ಸಾರ್ವಜನಿಕರಿಗೆ ನೀಡಿರುವ ಹಕ್ಕುಗಳ ರಕ್ಷಣೆ ಮಾಡುವುದರಲ್ಲಿ ಕೂಡ ಪೊಲೀಸರ ಪಾತ್ರ ಮುಖ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯು ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ, ಜಲಾಶಯಗಳು ಮುಂತಾದ ಸೂಕ್ಷ್ಮ ಪ್ರದೇಶಗಳಿವೆ. ಸಮುದ್ರ ತೀರ, ರಾಜ್ಯದ ಗಡಿಭಾಗ ರಕ್ಷಣೆಯ ಮಹತ್ವದ ಜವಾಬ್ದಾರಿಯೂ ಪೊಲೀಸ್ ಇಲಾಖೆಯ ಮೇಲಿದೆ. ಜತೆಗೆ, ಸಾರ್ವಜನಿಕರ ರಕ್ಷಣೆಯನ್ನೂ ಪೊಲೀಸ್ ಇಲಾಖೆ ಅತ್ಯಂತ ಜವಾಬ್ದಾರಿಯುತವಾಗಿ ಮಾಡುತ್ತಿದೆ. ಶಿರೂರು ಗುಡ್ಡ ಕುಸಿತ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಕಾರ್ಯ ಅನನ್ಯ ಎಂದರು.
ಕದಂಬ ನೌಕಾನೆಲೆಯ ಕಮಡೋರ್ ಎ.ಕೆ ಶರ್ಮಾ, ಜಿಪಂ ಸಿಇಒ ಈಶ್ವರ ಕಾಂದೂ, ಡಿಎಫ್‌ಒ ಸಿ.ರವಿಶಂಕರ, ಕೋಸ್ಟ್ ಗಾರ್ಡ್ ಕಮಾಂಡೆಂಟ್ ಕಿರಣ್ ಕುಮಾರ ಸಿನ್ಹಾ, ಹೋಂ ಗಾರ್ಡ್ ಕಮಾಂಡೆಂಟ್ ಸಂಜು ನಾಯಕ, ಸಿಐಎಸ್‌ಎಫ್, ಆರ್‌ಪಿಎಫ್ ಅಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಹುತಾತ್ಮರ ಗೌರವಾರ್ಥ ಮೂರು ಬಾರಿ ಗುಂಡು ಹಾರಿ, ಮೌನ ಆಚರಿಸಲಾಯಿತು.  ಎಸ್‌ಪಿ ಎಂ.ನಾರಾಯಣ ಹುತಾತ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಪಟ್ಟಿಯನ್ನು ಓದಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net