ಶಾಲಾ ಮಕ್ಕಳ ವಾಹನ ಚಾಲಕರ ಮಾಹಿತಿ ಪರಿಶೀಲನೆ ಠಾಣಾ ಮಟ್ಟದಲ್ಲಿ ನಡೆಸಲು ಪೊಲೀಸ್ ಆಯುಕ್ತರ ಸೂಚನೆ

mng--7 June police meeting
Published on

ಮಂಗಳೂರು: ವಿದ್ಯಾರ್ಥಿಗಳನ್ನು ಕರೆ ತರುವ ಶಾಲಾ ಹಾಗೂ ಇತರೇ ಬಾಡಿಗೆ ವಾಹನಗಳಾದ ಆಟೋ, ಟ್ಯಾಕ್ಸಿ ಇತ್ಯಾದಿಗಳ ಚಾಲಕರ, ಸಹಾಯಕರ ಪೂರ್ವಾಪರ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಿ ಪರಿಶೀಲಿಸಿ, ವರದಿ ಪಡೆಯುವಂತೆ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸೂಚಿಸಿದ್ದಾರೆ.


ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಗರದ ಪ್ರಮುಖ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಮುಖ್ಯಸ್ಥರು, ಶಾಲೆಗಳ ಮಕ್ಕಳ ಸುರಕ್ಷತಾ ಸಮಿತಿಯ ಸದಸ್ಯರು ಮತ್ತು ಶಾಲಾ ವಾಹನ ಚಾಲಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲಾ ವಾಹನಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಮೋಟಾರು ವಾಹನಗಳು (ಶಾಲಾ ಮಕ್ಕಳನ್ನು ಕರೆದ್ಯೊಯ್ಯುವ ವಾಹನಗಳ ಸ್ಥಿತಿಗತಿ) ನಿಯಮಗಳು-2012 ರಲ್ಲಿ ಸೂಚಿಸಿರುವ ನಿಬಂಧನೆಗಳನ್ನು ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ತಿಳಿಸಿ, ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಪಾಲನಾ ವರದಿ ನೀಡುವಂತೆ ಸೂಚಿಸಲಾಯಿತು.


ಶಾಲಾ ಕಾಲೇಜುಗಳು ಪ್ರಾರಂಭಗೊಳ್ಳುವ ಹಾಗೂ ಬಿಡುವ ಸಮಯದಲ್ಲಿ ರಸ್ತೆಗಳಲ್ಲಿ ಆಗುವ ವಾಹನ ದಟ್ಟಣೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ, ಶಾಲೆ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ವಾಹನಗಳನ್ನು ನಿಲ್ಲಿಸಲು ಹಾಗೂ ವಿದ್ಯಾರ್ಥಿಗಳನ್ನು ಇಳಿಸಲು ಅಥವಾ ಹತ್ತಿಸಲು ಶಾಲಾ ಕಾಲೇಜುಗಳ ಆವರಣದೊಳಗೆ ಸೂಕ್ತ ಪಾಕಿರ್ಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು. ವಾಹನ ಪಾಕಿರ್ಂಗ್ ಸ್ಥಳಾವಕಾಶ ಇಲ್ಲದೇ ಇರುವ ಶಾಲೆಗಳು ಅತೀ ಶೀಘ್ರವಾಗಿ ಪಾಕಿರ್ಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಶಾಲಾ/ಕಾಲೇಜಿಗೆ ಬರುವ ವಿದ್ಯಾರ್ಥಿಗಳು/ ಅವರನ್ನು ಕರೆತರುವ ಪೋಷಕರು ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ಈ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.


ಶಾಲಾ ವಾಹನಗಳಲ್ಲಿ ಹಾಗೂ ವಿದ್ಯಾರ್ಥಿಗಳು ಬರುವ ಇತರೆ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸದಂತೆ, ವಾಹನಗಳಲ್ಲಿ ಕರ್ಕಶ ಹಾರ್ನ್‌ಗಳನ್ನು ಬಳಸದಂತೆ ಸೂಕ್ತ ಸೂಚನೆಯನ್ನು ನೀಡಿ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಸೂಚಿಸಲಾಯಿತು.


ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಗೆ ಸಂಬಂಧಿಸಿದಂತೆ ಆಗಿಂದಾಗ್ಗೆ ಮಾಹಿತಿ ನೀಡಬೇಕು. ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಧಕ್ಕೆ ಆಗದಂತೆ ಶಾಲೆ / ಕಾಲೇಜುಗಳನ್ನು ಪ್ರಾರಂಭಿಸುವ ಹಾಗೂ ಅಂತ್ಯಗೊಳಿಸುವ ಸಮಯವನ್ನು ಬದಲಾಯಿಸಿಕೊಳ್ಳಬೇಕು ಎಂದು ಸೂಚಿಸಲಾಯಿತು.
ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ ದಿನೇಶ್ ಕುಮಾರ್ ಹಾಗೂ ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಹಾಗೂ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕರಾದ ಕೃಷ್ಣಾನಂದ.ಜಿ.ನಾಯ್ಕ, ಹುಲುಗಪ್ಪ ಡಿ, ಮತ್ತು ದೀಪಕ್ ಎಂ. ಕೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net