

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆ ಮಿತಿ ಮೀರುತ್ತಿದೆ. ಸಮಯ ಪಾಲನೆಗಾಗಿ ಚಾಲಕ, ನಿರ್ವಾಹಕರ ಒತ್ತಡದಿಂದ ದುರಂತಗಳು ಉಂಟಾಗುತ್ತಿದೆ. ಸಮಯ ಪಾಲನೆಯನ್ನು ಕ್ರಮಬದ್ಧಗೊಳಿಸಬೇಕು. ತಿಂಗಳೊಳಗೆ ಬಸ್ ತಂಗುದಾಣ ಇಲ್ಲದ ಕಡೆ ನಿರ್ಮಾಣ ಮಾಡಲು ಪಾಲಿಕೆ ಕ್ರಮ ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸೂಚನೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬುಧವಾರ ಬಸ್ಸು ಮಾಲೀಕರು, ಎನ್‌ಎಚ್‌ಐ, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ಈ ಸೂಚನೆ ನೀಡಿದರು. ತಿಂಗಳೊಳಗೆ ಮತ್ತೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು.
ನಗರದ ಅಂಬೇಡ್ಕರ್ ವೃತ್ತ, ಹಂಪನಕಟ್ಟೆ ಸೇರಿದಂತೆ ಪ್ರಮುಖ ಬಸ್ಸು ನಿಲ್ದಾಣಗಳಲ್ಲಿ ಬಸ್ಸುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದನ್ನು ತಪ್ಪಿಸಲು ಗೃಹರಕ್ಷಕರ ನಿಯೋಜನೆಯನ್ನು ತಮ್ಮ ಖರ್ಚಿನಲ್ಲಿ ಭರಿಸಲು ಬಸ್ಸು ಮಾಲೀಕರು ಒಪ್ಪಿಕೊಂಡಿದ್ದು, ಅದರಂತೆ ಕ್ರಮ ವಹಿಸಲಾಗುವುದು. ಬಸ್ಸು ನಿಲ್ದಾಣಗಳ ಸಮಸ್ಯೆಯನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಪೊಲೀಸ್ ಇಲಾಖೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಜತೆ ಜಂಟಿ ದಾಳಿಗಳನ್ನು ಕೂಡಾ ನಡೆಸಲಿದೆ ಎಂದು ಪೊಲೀಸ್ ಆಯುಕ್ತರು ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ನಗರದಲ್ಲಿ ಎಲ್ಲೆಲ್ಲಾ ಬಸ್ಸು ನಿಲ್ದಾಣಗಳ ಅಗತ್ಯವಿದೆ ಎಂಬ ಬಗ್ಗೆ ಮೂರು ತಿಂಗಳ ಹಿಂದೆಯೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ಒದಗಿಸಲಾಗಿದೆ. ಆದರೂ ಕ್ರಮ ಆಗಿಲ್ಲ. ಈ ನಡುವೆ ಸಮಯ ಪಾಲನೆಯ ಒತ್ತಡ ನಗರದಲ್ಲಿ ಬಸ್ಸುಗಳ ಚಾಲಕ ಮತ್ತು ನಿರ್ವಾಹಕರ ಮೇಲೆ ಸಾಕಷ್ಟು ಒತ್ತಡ ಬೀರುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇದನ್ನು ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕ್ರಮ ಆಗುವ ವಿಶ್ವಾಸವಿದೆ ಎಂದರು.
ವೀಡಿಯೋ ಪ್ರದರ್ಶಿಸಿ ಮನವರಿಕೆ
ನಗರದ ಪ್ರಮುಖ ಜಂಕ್ಷನ್ ಪ್ರದೇಶಗಳಲ್ಲಿ ಖಾಸಗಿ ಬಸ್ಸುಗಳ ಚಾಲಕರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವ ಹಾಗೂ ನಿರ್ಲಕ್ಷೃದ ಚಾಲನೆಗಳಿಂದ ಕಳೆದ ಕೆಲ ತಿಂಗಳಿಂದೀಚೆಗೆ ಸಂಭವಿಸಿದ ಭೀಕರ ಅಪಘಾತ ಪ್ರಕರಣಗಳ ವೀಡಿಯೋ ಕ್ಲಿಪ್ಪಿಂಗ್‌ಗಳ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ಬಸ್ಸು ಮಾಲೀಕರು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಪೊಲೀಸ್ ಆಯುಕ್ತರು ಮಾಡಿದರು.
ಬಸ್ಸು ಮಾಲೀಕರು- ಚಾಲಕರ ಪದೇ ಪದೇ ಸಭೆಗಳು, ಜಾಗೃತಿ ಕಾರ್ಯಕ್ರಮಗಳು ನಡೆದರೂ ನಿರ್ಲಕ್ಷೃದ ಚಾಲನೆಯಿಂದ ಅಪಘಾತ ಪ್ರಕರಣಗಳು ಮುಂದುವರಿಯುತ್ತಿದೆ. ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಈ ರೀತಿಯ ನಿರ್ಲಕ್ಷೃದಿಂದ ಆಗುವ ಜೀವಹಾನಿ ಕೊಲೆಗೆ ಸಮಾನ. ಇದಕ್ಕೆ ಸೂಕ್ತ ಪರಿಹಾರ ಅಗತ್ಯವಾಗಿದೆ ಎಂದು ಅನುಪಮ್ ಅಗ್ರವಾಲ್ ಹೇಳಿದರು.
ಸಿಟಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪ್ರತಿಕ್ರಿಯಿಸಿ, ಚಾಲಕ ಹಾಗೂ ನಿರ್ವಾಹಕರ ವರ್ತನೆಯಲ್ಲಿ ದೂರುಗಳು ಬರುವ ಬಗ್ಗೆ ಸರಿಪಡಿಸಲು ಬಹಳಷ್ಟು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇಲಾಖೆ ನೀಡುವ ಸಲಹೆಗಳನ್ನು ಪಾಲಿಸಲು ಕೂಡಾ ಬಸ್ಸು ಮಾಲೀಕರು ಸಿದ್ಧರಿದ್ದಾರೆ ಎಂದರು.