ಹೆದ್ದಾರಿ ಗುಂಡಿ ಮುಚ್ಚಿದ ಪೊಲೀಸರು

09Kush02
ಕುಶಾಲನಗರ ತಾವರೆಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ದಾನಿಗಳ ಮೂಲಕ ಕುಶಾಲನಗರ ಸಂಚಾರ ಠಾಣಾಧಿಕಾರಿ ಕಾಶೀನಾಥ್ ಬಗಲಿ ಮತ್ತು ಪೊಲೀಸ್ ಸಿಬ್ಬಂದಿ ಮುಚ್ಚಿಸಿದರು.
Published on

ಕುಶಾಲನಗರ: ಕುಶಾಲನಗರ-ಮಡಿಕೇರಿ ಮಾರ್ಗದ ತಾವರೇಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಗುಂಡಿಮಯವಾಗಿರುವುದನ್ನು ಗಮನಿಸಿದ ಕುಶಾಲನಗರ ಠಾಣೆ ಪೊಲೀಸರು, ದಾನಿಗಳ ನೆರವಿನೊಂದಿಗೆ ಶನಿವಾರ ದುರಸ್ತಿ ಕಾರ್ಯ ನಡೆಸಿದರು.

ಹೆದ್ದಾರಿ ದುಸ್ಥಿತಿ ಕುರಿತು ಇತ್ತೀಚೆಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾದರೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಗುಂಡಿ ಮುಚ್ಚುವ ಗೋಜಿಗೆ ಹೋಗಲಿಲ್ಲ. ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಸೂಚನೆಯಂತೆ ಸಂಚಾರ ಠಾಣಾಧಿಕಾರಿ ಕಾಶೀನಾಥ್ ಬಗಲಿ ಅವರು ಶುಕ್ರವಾರ ಸ್ಥಳೀಯ ಉದ್ಯಮಿ ಬಿಎಸ್‌ಆರ್ ಸಂಸ್ಥೆಯ ಮಾಲೀಕ ಡಿ.ಎಸ್.ಜಗದೀಶ್ ಅವರ ನೆರವು ಪಡೆದು, ಶನಿವಾರ ಡಾಂಬರು ಹಾಕಿ ಬೃಹತ್ ಗಾತ್ರದ ಗುಂಡಿಗಳನ್ನು ಮುಚಿಸಿದರು.
ತಾವರೆಕೆರೆ ಸಮೀಪದಲ್ಲಿ ಹೆದ್ದಾರಿ ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದರು.

ದೇವಾಂಗ ಸಮಾಜದ ಅಧ್ಯಕ್ಷ ಡಿ.ವಿ.ರಾಜೇಶ ವಿಜಯವಾಣಿಯೊಂದಿಗೆ ಮಾತನಾಡಿ, ಪೊಲೀಸರಿಗೆ ತಾವು ಕರ್ತವ್ಯ ನಿರ್ವಹಿಸುವ ಊರಿನ ಬಗ್ಗೆ ಇರುವ ಕಾಳಜಿಗೆ ಇದು ಸ್ಪಷ್ಟ ಉದಾಹರಣೆ. ಪೊಲೀಸರು ಜನ ಮೆಚ್ಚುವ ಕಾರ್ಯ ಮಾಡಿದ್ದಾರೆ ಎಂದರು. ಪೊಲೀಸರ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net