

ಮಂಗಳೂರು: ನಿಗದಿತ ದರಕ್ಕಿಂತ ಅಧಿಕ ಬಾಡಿಗೆ ದರ ವಸೂಲಿ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ 16 ಆಟೋರಿಕ್ಷಾ ಚಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಪೊಲೀಸರು ಪ್ರಯಾಣಿಕರ ಸೋಗಿನಲ್ಲಿ ಆಟೋರಿಕ್ಷಾದಲ್ಲಿ ಸಂಚರಿಸಿ ಪರಿಶೀಲಿಸಿದಾಗ ಅಧಿಕ ಬಾಡಿಗೆ ದರ ವಸೂಲಿ ಮಾಡುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಗರದಲ್ಲಿ ಹಲವು ಸಮಯಗಳಿಂದ ಈ ಸಮಸ್ಯೆ ಇದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿತ್ತು. ಕಂಕನಾಡಿಯಿಂದ ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ಬಾಡಿಗೆ ಬಾಡಿಗೆಗೆ ಕರೆದರೆ ಆಟೋ ಚಾಲಕರು ಬರುವುದಿಲ್ಲ. ಹಗಲಿನ ವೇಳೆಯಲ್ಲೂ ಎರಡು ಪಟ್ಟು ದರ ನೀಡಿದರೆ ಮಾತ್ರ ಬರುತ್ತೇವೆ ಎಂದು ಹೇಳುವುದು ಸಾಮಾನ್ಯ. ತುರ್ತು ಇದ್ದವರು ಅನಿವಾರ್ಯವಾಗಿ ಎರಡು ಪಟ್ಟು ದರ ನೀಡಿ ಪ್ರಯಾಣಿಸುತ್ತಾರೆ. ಇನ್ನು ಕೆಲವರು ಚರ್ಚೆ ಮಾಡುತ್ತಾರೆ. ಈ ಬಗ್ಗೆ ಸಾರ್ವಜನಿಕರಿಂದ ಹಲವು ಬಾರಿ ಆರ್‌ಟಿಒ ಅಧಿಕಾರಿಗಳಿಗೆ, ಪೊಲೀಸರಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.