

ಬೆಂಗಳೂರು: ಅನ್ಯಾಯ ಮಾಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಯುವತಿಯೊಬ್ಬಳು ಮಾತಿಗಿಳಿದು, ಅದು ವಾಗ್ವಾದಕ್ಕೆ ತಿರುಗಿ ಕೊನೆಗೆ ಆಕೆ ಪೊಲೀಸರ ಕೈಗೇ ಕಚ್ಚಿ ದೊಡ್ಡ ರಾದ್ಧಾಂತ ನಡೆದ ಪ್ರಸಂಗವೊಂದು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಚಿಕ್ಕಪೇಟೆಗೆ ಶಾಪಿಂಗ್ಗೆಂದು ಬಂದಿದ್ದ ಯುವತಿ, ಹೀಗೆ ರಸ್ತೆ ಬದಿಯಲ್ಲಿ ನಡೆಸಿದ ಅವಾಂತರದಿಂದ ಬಹಳಷ್ಟು ಜನರು ನಿಂತು ನೋಡುವಂತಾಗಿತ್ತು. ಈಕೆ ಶಾಪಿಂಗ್ಗೆ ಬಂದಿದ್ದ ವೇಳೆ ಪೊಲೀಸರು ಫುಟ್ಪಾತ್ ಮೇಲಿದ್ದ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದರು.
ಪೊಲೀಸರ ಈ ತೆರವು ಕಾರ್ಯಾಚರಣೆ ನೋಡಿದ ಈಕೆ ಯಾಕೆ ಜನರಿಗೆ ಸಮಸ್ಯೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಆಗ ಪೊಲೀಸ್ ಮತ್ತು ಯುವತಿ ನಡುವೆ ವಾಗ್ವಾದ ನಡೆದಿದೆ. ಅದನ್ನು ಈಕೆ ಮೊಬೈಲ್ಫೋನ್ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾದಾಗ ಪೊಲೀಸ್ ಮೊಬೈಲ್ಫೋನ್ ಕಿತ್ತುಕೊಂಡಿದ್ದಾರೆ.
ಮೊಬೈಲ್ಫೋನ್ ಕೊಡಿ ಎಂದು ಕೇಳಿದರೂ ಪೊಲೀಸರು ಕೊಡದಿದ್ದಾಗ ಅವರನ್ನು ಅಡ್ಡಗಟ್ಟಿದ ಯುವತಿ, ಕೊನೆಗೆ ಪೊಲೀಸ್ ಕೈಗೆ ಕಚ್ಚಿದ್ದಾಳೆ. ಈ ಸಂದರ್ಭದಲ್ಲಿ ಜನರು ಗುಂಪುಗೂಡಿ ನೋಡಲಾರಂಭಿಸಿದ್ದು, ಬಳಿಕ ಆಕೆಯನ್ನು ಕೆ.ಆರ್.ಮಾರುಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.