

ಬೆಂಗಳೂರು: ಕಾನೂನು ಸುವ್ಯವಸ್ಥೆ, ಅಪರಾಧ ಪತ್ತೆ, ಭದ್ರತೆ.. ಹೀಗೆ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆ ಬ್ಯಾಂಡ್ ಮೂಲಕವೂ ಆಗಿಂದಾಗ್ಗೆ ಗಮನ ಸೆಳೆದಿದ್ದಿದೆ. ಬ್ರಿಟಿಷರ ಬಳುವಳಿ ಎಂಬಂತೆ ಉಳಿದಿರುವ ಪೊಲೀಸ್ ಬ್ಯಾಂಡ್, ಪ್ರಮುಖ ಕಾರ್ಯಕ್ರಮಗಳಲ್ಲಿ ತನ್ನ ಕಲೆಯನ್ನು ಪ್ರಸ್ತುತಪಡಿಸುತ್ತ ಸಂಪ್ರದಾಯ ಮುಂದುವರಿಸುತ್ತ ಬಂದಿದೆ.
ಇದೀಗ ರಾಜ್ಯ ಪೊಲೀಸ್ ಬ್ಯಾಂಡ್ ಕನಕ, ಪುರಂದರ, ತ್ಯಾಗರಾಜರ ಕೀರ್ತನೆಯನ್ನು ಪ್ರಸ್ತುತಪಡಿಸುವ ಮೂಲಕ ಸಾಂಪ್ರದಾಯಿಕ ದೇಸಿ ಟಚಪ್ ನೀಡುವ ಕೆಲಸವನ್ನು ವಿಸ್ತರಿಸಿದೆ.
ಕನಕದಾಸರಿಂದ ರಚನೆಯಾದ ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ... ನಿಮ್ಮೊಳಗಿಹನ್ಯಾರಮ್ಮ
ಕಮ್ಮಗೋಲನವೈರಿ, ಸುತನಾದ ಸೊಂಡಿಲ... ಹೆಮ್ಮೆಯ ಗಣನಾಥನೆ..’ ಕೃತಿ ಒಂದು ಕಾಲದಲ್ಲಿ ಪ್ರಖ್ಯಾತ, ಮನೆಮನೆಯಲ್ಲೂ ಗುನುಗುತ್ತಿದ್ದ ಹಾಡು. ವಿದ್ಯಾಭೂಷಣರ ಕಂಠ ಸಿರಿಯಲ್ಲಿ ಹೆಚ್ಚು ಖ್ಯಾತವಾಗಿತ್ತು. ಈ ಹಾಡನ್ನು ಪೊಲೀಸ್ ಬ್ಯಾಂಡ್ ತಂಡ ಕಲಿತು ಪ್ರಸ್ತುತಪಡಿಸಲು ಸಿದ್ಧವಾಗಿದೆ.
ಸೋಮವಾರ ರಾಜ್ಯಪಾಲರು ವಿಧಾನ ಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲು ವಿಧಾನಸಭೆಗೆ ಆಗಮಿಸುತ್ತಿದ್ದು, ಈ ವೇಳೆ ಈ ಕೃತಿಯನ್ನು ಪೊಲೀಸ್ ಬ್ಯಾಂಡ್ ಪ್ರಸ್ತುತಪಡಿಸುತ್ತಿದೆ.
ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಬ್ಯಾಂಡ್ ಮುಖ್ಯಸ್ಥ ಆರ್. ಮೋಹನ್, ನಮ್ಮ ತಂಡದಲ್ಲಿ 21 ಸದಸ್ಯರಿದ್ದು, ನಿರಂತರ ಪರಿಶ್ರಮದಿಂದ 150 ಕೃತಿ ಪ್ರಸ್ತುತಪಡಿಸುತ್ತೇವೆ. ಹೊಸದಾಗಿ ಆರು ಕೃತಿ ಕಲಿತಿದ್ದು, ಇದರಲ್ಲಿ ಕನಕ, ಪುರಂದರ, ತ್ಯಾಗರಾಜರ ಕೃತಿಗಳಿವೆ’ ಎಂದರು.
ಕನಕ ದಾಸರು ರಚಿಸಿದ ನಮ್ಮಮ್ಮ ಶಾರದೆ..., ಜಯಚಾಮರಾಜೇಂದ್ರ ಒಡೆಯರ್ ರಚಿಸಿದ ಷಡ್ವಿದ ಮಾರ್ಗಿಣಿ ರಾಗದಲ್ಲಿ ಶ್ರೀ ಚಾಮುಂಡೇಶ್ವರಿ ಭಜರೇ, ತ್ಯಾಗರಾಜರು ರಚಿಸಿದ ಗಂಭೀರವಾಣಿ ರಾಗದಲ್ಲಿ ಸದಾಮತಿ, ಪುರಂದರ ದಾಸರ ರಚನೆಯ ಭಾಗ್ಯದ ಲಕ್ಷ್ಮಿ ಬಾರಮ್ಮ ಕೃತಿಯನ್ನು ಕಲಿತಿದ್ದು, ಇದನ್ನು ಪ್ರಸ್ತುತ ಪಡಿಸುವುದೇ ಹೆಮ್ಮೆಯ ವಿಚಾರ ಎಂದರು. ಅಂದಹಾಗೆ ಇವರು ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದು, ಎ ಗ್ರೇಡ್ ಕಲಾವಿದರೂ ಹೌದು.