ಕೊಳ್ಳೇಗಾಲ: ಅಕ್ರಮ ಮರಳು ಸಂಗ್ರಹಿಸಿ ಸಾಗಣೆ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಪರಾರಿಯಾಗಿರುವ ಮತ್ತಿಬ್ಬರ ಸೆರೆಗೆ ಬಲೆ ಬೀಸಿದ್ದಾರೆ. ತಾಲೂಕಿನ ಹಳೇ ಹಂಪಾಪುರದಲ್ಲಿ ಖಾಲಿ ಸ್ಥಳವೊಂದರಲ್ಲಿ ಸಂಗ್ರಹಿಸಿದ ಮರಳನ್ನು ಎತ್ತಿಗಾಡಿಗೆ ತುಂಬುತ್ತಿದ್ದ ಕಾರ್ತಿಕ್, ರಾಜು ಬಂಧಿತರು. ಟಿವಿಎಸ್ ಎಕ್ಸೆಲ್‌ನಲ್ಲಿ ಮರಳು ಮೂಟೆಗಳನ್ನು ಹಾಕುತ್ತಿದ್ದ ಹೊಸ ಹಂಪಾಪುರ ಗ್ರಾಮದ ರಾಮು, ಸೈನಿಕ ಪರಾರಿಯಾಗಿದ್ದಾರೆ. ಗ್ರಾಮದ ಕಾವೇರಿ ನದಿ ದಡದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸರು ದಾಳಿ ನಡೆಸಿದ್ದಾರೆ.ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.