

ಶ್ರೀನಿವಾಸಪುರ : ತಾಲೂಕಿನ ನಂಬಿಹಳ್ಳಿಯಲ್ಲಿ ಜಾತ್ರೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಉಂಟಾದ ಜಗಳ ಬಿಡಿಸಲು ತೆರಳಿದ ನನ್ನ ಮೇಲೆಯೇ ಪೊಲೀಸರು ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಪುರಸಭೆ ಸದಸ್ಯ ನಾಗೇಶ್ ಆರೋಪಿಸಿದ್ದಾರೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಲಾಟೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಪುರ ಠಾಣೆ ಪೇದೆಗಳು ಹಲ್ಲೆ ಮಾಡಿ, ನಿಂದನೆ ಮಾಡಿದರು ಎಂದರು. ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರು ನಾಗೇಶ್ ಆರೋಗ್ಯ ವಿಚಾರಿಸಿ, ಘಟನೆಯ ಮಾಹಿತಿ ಪಡೆದು, ಹಲ್ಲೆ ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ವಾಲ್ಮೀಕಿ ಸಮುದಾಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ಮಾತನಾಡಿ, ಪೊಲೀಸರ ನಡೆ ಅಮಾನವೀಯ, ಹಲ್ಲೆ ಮಾಡಿರುವ ಪೇದೆಗಳನ್ನು ತಕ್ಷಣ ವಜಾ ಮಾಡಿ, ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಕೋಲಾರ ಅಥವಾ ಶ್ರೀನಿವಾಸಪುರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರಿಂದ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕೋಲಾರ: ಸೋಮವಾರ ಬೆಳಗ್ಗೆ ಇಬ್ಬರ ನಡುವೆ ನಡೆದಿದ್ದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ ರಾತ್ರಿ ಕೊಲೆಯಾಗಿದೆ. ಈ ಬೆನ್ನಲ್ಲೇ ರೊಚ್ಚಿಗೆದ್ದ ಕೊಲೆಯಾದ ವ್ಯಕ್ತಿಯ ಸಂಬಂಧಿಕರು ಕೊಲೆ ಮಾಡಿದ ಆರೋಪಿ ಮನೆಗೆ ಬೆಂಕಿ ಹಚ್ಚಿದ್ದಾರೆ. ತಾಲೂಕಿನ ಪುಲಗೂರಕೋಟೆ ಪಂಚಾಯಿತಿಯ ಗುಂತೋರಪಲ್ಲಿ ಗ್ರಾಮದ ಮಂಜುನಾಥ್ ಮತ್ತು ಕೂಲಗುರ್ಕಿ ಗ್ರಾಮದ ಶ್ರೀಮೂರ್ತಿ ಮಧ್ಯೆ ಸೋಮವಾರ ಬೆಳಗ್ಗೆ ಸಣ್ಣ ಗಲಾಟೆ ನಡೆದಿತ್ತು. ಅದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಶ್ರೀಮೂರ್ತಿ ಸಂಜೆ ಸೋಮಯಾಜಲಹಳ್ಳಿಯಲ್ಲಿ ಎದುರಿಗೆ ಸಿಕ್ಕ ಮಂಜುನಾಥ್ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಟನೆಯಿಂದ ರೊಚ್ಚಿಗೆದ್ದ ಮಂಜುನಾಥ್ ಸಂಬಂಧಿಕರು ಆರೋಪಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ನಂದಿಸಲು ಬಂದ ಅಗ್ನಿ ಶಾಮಕ ದಳದವರನ್ನೂ ಗ್ರಾಮಕ್ಕೆ ಪ್ರವೇಶಿಸದಂತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಒಪ್ಪಿಸುವವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಮಂಜುನಾಥ್ ಕುಟುಂಬ ಪಟ್ಟು ಹಿಡಿದು, ಸೋಮಯಾಜಲಹಳ್ಳಿ ಬಸ್ ನಿಲ್ದಾಣದಲ್ಲಿಯೇ ಶವವಿಟ್ಟು ಟಯರ್ಗಳಿಗೆ ಬೆಂಕಿ ಹಚ್ಚಿ, ಪೊಲೀಸರನ್ನೂ ಗ್ರಾಮಕ್ಕೆ ಪ್ರವೇಶಿಸಲು ಬಿಡದಿರುವುದು ಉದ್ವಿಗ್ನತೆಗೆ ಕಾರಣವಾಗಿದೆ.