ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಪ್ರಿಯತಮನ ಜತೆ ಸ್ನೇಹಿತನೂ ಭಾಗಿ..

rape pic
Published on

ಆನೇಕಲ್: ಯುವತಿಯೊಬ್ಬಳ ಮೇಲೆ ಇಬ್ಬರು ಅತ್ಯಾಚಾರ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಸೂರ್ಯ ಸಿಟಿಯಲ್ಲಿ ಈ ಅತ್ಯಾಚಾರ ನಡೆದಿದೆ.

ಯುವತಿಯ ಪ್ರಿಯತಮ ಮತ್ತು ಆತನ ಸ್ನೇಹಿತ ಜತೆಯಾಗಿ ಈ ಅತ್ಯಾಚಾರ ನಡೆಸಿದ್ದಾರೆ. ಈ ಸಂಬಂಧ 22 ವರ್ಷದ ಆ ಯುವತಿ ಸೂರ್ಯ ಸಿಟಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಬ್ಬರೂ ಉತ್ತರ ಭಾರತದ ಮೂಲದವರಾಗಿದ್ದು, ಕಳೆದ ಕೆಲವು ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇವರಲ್ಲಿ ಒಬ್ಬನನ್ನು ಯುವತಿ ಪ್ರೀತಿಸುತ್ತಿದ್ದಳು. ಇವರಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಯುವತಿಯ ಮನೆ ಇತ್ತು.

ಕಳೆದ ವಾರ ಪ್ರಿಯತಮ ತನ್ನ ಪ್ರೇಯಸಿಯನ್ನು ಮನೆಗೆ ಆಹ್ವಾನಿಸಿದ್ದ. ಆದರೆ ಆಕೆ ರಾತ್ರಿಯಾಗಿದೆ ಹೇಗೆ ಬರಲಿ ಎಂದು ಕೇಳಿದ್ದಳು. ಅದಕ್ಕೆ ಆತ ನಿಜವಾದ ಪ್ರೀತಿ ಇದ್ದರೆ ಮನೆಗೆ ಬಾ, ನನ್ನ ಸ್ನೇಹಿತ ಬರುತ್ತಾನೆ, ಅವನ ಜತೆಗೆ ಬಾ ಎಂದು ಹೇಳಿದ್ದ.

ಹಾಗೆ ಮನೆಗೆ ಬಂದಿದ್ದ ಆಕೆಗೆ ಮತ್ತು ಬರುವ ಔಷಧ ನೀಡಿದ್ದರು. ಬಳಿಕ ಆಕೆಯ ಮೇಲೆ ಇಬ್ಬರೂ ಅತ್ಯಾಚಾರ ಎಸಗಿದ್ದರು. ನಂತರ ಎಚ್ಚರಗೊಂಡ ಆಕೆಯನ್ನು ಅವರು ಮನೆಗೆ ಬಿಟ್ಟು ಬಂದಿದ್ದರು. ತದನಂತರ ಅವಳು ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net