ಅಣ್ಣ-ತಮ್ಮ ಸೇರಿ ಕೆಲಸ ಕೊಟ್ಟಿದ್ದಾತನ ಮಗನನ್ನೇ ಕೊಂದು ಮೂಟೆ ಕಟ್ಟಿದ್ದರು!; ಇಬ್ಬರು ಕೊಲೆ ಆರೋಪಿಗಳ ಬಂಧನ...

ಫೀಚರ್‌
Published on

ಬೆಂಗಳೂರು: ಎರಡು ದಿನಗಳ ಹಿಂದೆ ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿ ಮೂಟೆಯಲ್ಲಿ ಕಂಡುಬಂದಿದ್ದ ವಿದ್ಯಾರ್ಥಿ ತರುಣ್‌ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತರುಣ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರ ಪೊಲೀಸರು ನಾಸಿರ್‌ ಹಾಗೂ ಸೈಯದ್‌ ತಜ್ಮುಲ್‌ ಎಂಬವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರೂ ಸಹೋದರರು, ತರುಣ್‌ಗೆ ಗೆಳೆಯರಾಗಿದ್ದವರು. 

ಭಾರತೀನಗರ ಮುರುಗಪಿಳ್ಳೈ ನಿವಾಸಿ ತರುಣ್‌ (20) ತಂದೆ ಮಣಿಯವರಿಂದ 2 ಸಾವಿರ ರೂಪಾಯಿ ಪಡೆದುಕೊಂಡು ಪಟಾಕಿ ತರುವುದಾಗಿ ಹೇಳಿ ನ. 1ರಂದು ಹೊರಹೋಗಿದ್ದ. ರಾತ್ರಿಯಾದರೂ ಮರಳದ್ದರಿಂದ ಬಳಿಕ ಭಾರತೀನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ಮಂಗಳವಾರ ರಾಜರಾಜೇಶ್ವರಿ ನಗರ ರಾಜಾಕಾಲುವೆ ಬಳಿ ಕಂಡುಬಂದ ಮೂಟೆಯಲ್ಲಿ ಅಪರಿಚಿತ ಶವ ಇರುವುದು ತಿಳಿದುಬಂದಿತ್ತು. ಪೊಲೀಸರು ತನಿಖೆ ನಡೆಸಿದಾಗ ಅದು ತರುಣ್‌ ಶವ ಎಂಬುದು ದೃಢಪಟ್ಟಿತ್ತು.

ತರುಣ್‌ ಬಾಯಿಗೆ ಟೇಪ್‌ ಅಂಟಿಸಿ, ಕೈಕಾಲು ಕಟ್ಟಿ, ಉಸಿರುಗಟ್ಟಿಸಿಕೊಂದು ಮೂಟೆಯೊಳಗೆ ತುಂಬಿ ಕಾಲುವೆಗೆ ಎಸೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಗಡುಕರು ತರುಣ್‌ ತಂದೆಯ ಜೊತೆಗೆ ಕೆಲಸ ಮಾಡುತ್ತಿದ್ದವರೇ. ಮಣಿ ಜೊತೆ ಫ್ರೂಟ್ಸ್‌ ಕಟಿಂಗ್‌ ಕೆಲಸ ಮಾಡುತ್ತಿದ್ದ ಇವರು, ಆತನ ಬಳಿ ಹಣ ಇರುವುದನ್ನು ತಿಳಿದು ಬ್ಲ್ಯಾಕ್‌ಮೇಲ್‌ ಮಾಡಿ ವಸೂಲಿ ಮಾಡಲು ಈ ಕೃತ್ಯ ಎಸಗಿದ್ದರು. ಹಣ ವಸೂಲಿ ಮಾಡಬೇಕು ಎಂದುಕೊಂಡಿದ್ದ ಈ ಆರೋಪಿಗಳು ತರುಣ್‌ ತಂದೆ ಪೊಲೀಸರ ಮೊರೆಹೋಗಿದ್ದಕ್ಕೆ ಕಂಗಾಲಾಗಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net