ಚಿನ್ನಾಭರಣ ಕದಿಯುತ್ತಿದ್ದ ಮೂವರು ಬಂಧನ: 47 ಲಕ್ಷ ರೂ ಮೌಲ್ಯದ ವಸ್ತು ವಶ

Sp Press Meet Mandya
Published on

ಮಂಡ್ಯ: ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ 47 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮದ್ದೂರು ತಾಲೂಕು ಅಣ್ಣೂರು ಗೇಟ್ ನಿವಾಸಿ ಶೇಖರ್ ಅಲಿಯಾಸ್ ಅಣ್ಣೂರು ಶೇಖರ್(54), ಕ್ಯಾತಘಟ್ಟ ನಿವಾಸಿಗಳಾದ ಕೃಷ್ಣ ಅಲಿಯಾಸ್ ಕ್ಯಾತಘಟ್ಟ ಕೃಷ್ಣ(50), ವೆಂಕಟೇಶ್(62) ಬಂಧಿತರು. ಹಂದಿ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು, ಸುಮಾರು 30 ವರ್ಷದಿಂದ ಕಳ್ಳತನ ಕೃತ್ಯದಲ್ಲಿಯೂ ಭಾಗಿಯಾಗುತ್ತಿದ್ದರು. ಇವರ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳವಳ್ಳಿ ತಾಲೂಕು ಕಿರುಗಾವಲು ಸಂತೆಮಾಳ ನಿವಾಸಿ ಕಮಲಮ್ಮ ಎಂಬುವರು ಮಾ.9ರಂದು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿ ಮರುದಿನ ವಾಪಸ್ ಬಂದು ನೋಡಿದಾಗ ಕಳ್ಳತನವಾಗಿತ್ತು. ಬೀರುವಿನ ಬಾಗಿಲು ಒಡೆದು 55 ಗ್ರಾಂ ತೂಕದ ಚಿನ್ನಾಭರಣ, 80 ಸಾವಿರ ರೂ ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅದರಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಖಚಿತ ಮಾಹಿತಿ ಆಧಾರದ ಮೊದಲು ಅಣ್ಣೂರು ಶೇಖರ್ ಅವರನ್ನು ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿ ಮೇರೆಗೆ ಕೃಷ್ಣ, ವೆಂಕಟೇಶ್ ಅವರನ್ನು ದಸ್ತಗಿರಿ ಮಾಡಲಾಯಿತು. ಬಳಿಕ ವಿಚಾರಣೆ ವೇಳೆ ಮೂವರು ನೀಡಿದ ಮಾಹಿತಿ ಆಧರಿಸಿ ಅವರು ಬೆಂಗಳೂರು, ಮೈಸೂರು ಹಾಗೂ ಇತರೆಡೆ ಮಾರಾಟ ಮಾಡಿದ್ದ, ಗಿರವಿ ಇಟ್ಟಿದ್ದ 670 ಗ್ರಾಂ ತೂಕದ ಚಿನ್ನಾಭರಣ, 170 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ಒಂದು ಟಿವಿಎಸ್ ಎಕ್ಸೆಲ್ ಮೊಪೆಡ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.
ಆರೋಪಿಗಳು ಕಮಲಮ್ಮ ಅವರ ಮನೆಯಲ್ಲಿನ ಕಳ್ಳತನ ಪ್ರಕರಣ ಮಾತ್ರವಲ್ಲದೆ ಮದ್ದೂರು ತಾಲೂಕಿನ ಬೆಸಗರಹಳ್ಳಿ, ಕೆ.ಎಂ.ದೊಡ್ಡಿ ಹಾಗೂ ಮಳವಳ್ಳಿ ತಾಲೂಕಿನ ಹಲಗೂರು, ಬೆಳಕವಾಡಿ, ಮಳವಳ್ಳಿ ಗ್ರಾಮಾಂತರ ಕಿರುಗಾವಲು ಠಾಣೆ ವ್ಯಾಪ್ತಿಯಲ್ಲಿ ಒಟ್ಟು 14 ಕಡೆಗಳಲ್ಲಿ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಕಳೆದ 10 ವರ್ಷದಿಂದ ಇವರು ಬಂಧನಕ್ಕೆ ಒಳಗಾಗಿರಲಿಲ್ಲ. ಅದಕ್ಕೂ ಹಿಂದೆ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 40 ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ. ಹಳೆಯ ಪ್ರಕರಣಗಳಲ್ಲಿ ಇವರು ಬಂಧಿತರಾಗಿ ಬಿಡುಗಡೆಯಾಗಿದ್ದರು ಎಂದು ವಿವರಿಸಿದರು.
ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್‌ಪಿ ಕೆ.ವಿ.ಕೃಷ್ಣಪ್ಪ, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಪಿಎಸ್‌ಐಗಳಾದ ಡಿ.ರವಿಕುಮಾರ್, ವಿ.ಸಿ.ಅಶೋಕ್, ಬಿ.ಮಹೇಂದ್ರ, ಎಎಸ್‌ಐ ಸಿದ್ದರಾಜು, ಸಿಎಚ್‌ಸಿಗಳಾದ ರಿಯಾಜ್ ಪಾಷಾ, ಪ್ರಭುಸ್ವಾಮಿ, ನಾಗೇಂದ್ರ, ಮಹದೇವ, ಜಯಕುಮಾರ್, ಮಹೇಶ್, ಶ್ರೀನಿವಾಸ, ಮೋಹನ್‌ಕುಮಾರ್, ಉಮೇಶ್, ಸಿಪಿಸಿಗಳಾದ ಸಿದ್ದರಾಜು, ಕೌಶಿಕ್, ವಿಠಲ, ಅರುಣ್, ಸುಬ್ರಮಣಿ, ಮಹೇಂದ್ರ, ಶ್ರೀನಿವಾಸ್, ಮಧುಕಿರಣ್, ಎನ್.ಸಿ.ಶಿವಕುಮಾರ್, ಮಂಡ್ಯ ಸಿಡಿಆರ್ ವಿಭಾಗದ ಸಿಪಿಸಿ ರವಿಕಿರಣ್, ಲೋಕೇಶ್, ಎಎಚ್‌ಸಿಗಳಾದ ಮಹದೇವಸ್ವಾಮಿ, ಪ್ರೀತಿಕುಮಾರ್, ನರಸಿಂಹಮೂರ್ತಿ, ಶಿವರಾಜು ಅವರಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್‌ಪಿ ಕೆ.ವಿ.ಕೃಷ್ಣಪ್ಪ ಹಾಜರಿದ್ದರು.

ಹಿಂಬಾಗಿಲ ಮನೆಯೇ ಟಾರ್ಗೆಟ್
ಹಲವು ವರ್ಷದಿಂದ ಕಳ್ಳತನವನ್ನು ವೃತ್ತಿ ಮಾಡಿಕೊಂಡಿದ್ದ ಈ ತಂಡ, ಹಿಂಬಾಗಿಲಿರುವ ಹಾಗೂ ಒಂಟಿ ಮನೆಯನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದರು. ಸ್ವಲ್ಪ ದಿನ ಗಮನಿಸಿಕೊಂಡು ಚಿನ್ನಾಭರಣ ದೋಚುತ್ತಿದ್ದರು. ಮುಂಬಾಗಿಲ ಮನೆಯಾದರೆ ಜನರಿಗೆ ಗೊತ್ತಾಗಬಹುದೆನ್ನುವ ಕಾರಣಕ್ಕೆ ಹಿಂಬಾಗಿಲಿರುವ ಮನೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದಲ್ಲದೆ ಒಂಟಿ ಮನೆಯಲ್ಲಿಯೂ ಕೈಚಳಕ ತೋರುತ್ತಿದ್ದರು. ಇದಲ್ಲದೆ ಮನೆಯೊಳಗೆ ಕುಟುಂಬಸ್ಥರಿದ್ದರೂ ಅವರಿಗೆ ಗೊತ್ತಾಗದಂತೆ ಕೃತ್ಯ ಎಸಗುತ್ತಿದ್ದರು. ಇದರ ಆಧಾರದ ಮೇಲೆಯೇ ಹಾಗೂ ಹಿಂದಿನ ಪ್ರಕರಣವನ್ನು ಗಮನಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net