ಏಳು ಖತರ್ನಾಕ್ ಕಳ್ಳರ ಬಂಧನ: ಕೋಟ್ಯಂತರ ರೂ ಮೌಲ್ಯದ ವಸ್ತು, ನಗದು ವಶ

Police arrested the thief mandya
Published on

ಮಂಡ್ಯ: ಜಿಲ್ಲೆಯ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ ಇವರಿಂದ ಕೋಟ್ಯಂತರ ರೂ ಮೌಲ್ಯದ ವಸ್ತು, ನಗದ ವಶಪಡಿಸಿಕೊಳ್ಳಲಾಗಿದೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮನೆ ಬೀಗ ಮುರಿದು 83 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ನಾಲ್ವರು ಆರೋಪಿಗಳು ಹಾಗೂ ಇವರಿಗೆ ಸಹಕಾರ ನೀಡುತ್ತಿದ್ದ ಪೊಲೀಸ್ ಪೇದೆಯನ್ನೂ ಬಂಧಿಸಲಾಗಿದೆ. ಮೈಸೂರಿನ ಫಯಾಜ್, ಮಹಮದ್ ಮುನ್ನಾ, ಅಯೂಬ್, ಪ್ರಸಾದಿ ಹಾಗೂ ಪೇದೆ ಕೆಂಡಗಣ್ಣ ಬಂಧಿತರು. ಮದ್ದೂರು ಪಟ್ಟಣದ ಕೆ.ಎಚ್.ನಗರ ನಿವಾಸಿ ಡಾ.ಚಂದ್ರು ಅವರು ಜ.17ರಂದು ಮನೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ ಹೊರಗೆ ಹೋಗಿದ್ದರು. 18ರಂದು ವಾಪಸ್ ಬಂದು ನೋಡಲಾಗಿ ಮನೆಯ ಬೀಗ ಮುರಿದು ಕಳ್ಳತನವಾಗಿರುವುದು ತಿಳಿಯಿತು. ಈ ಸಂಬಂಧ ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು ಎಂದು ಹೇಳಿದರು.
ಮನೆಯ ಕೊಠಡಿಯಲ್ಲಿ ಬೀರುವಿನಲ್ಲಿದ್ದ ಒಂದೂವರೆ ಕೆ.ಜಿ ಚಿನ್ನಾಭರಣ, 8 ಲಕ್ಷ ರೂ ಕಳವು ಮಾಡಿದ್ದಾರೆಂದು ತಿಳಿಸಿದ್ದರು. ಈ ಸಂಬಂಧ ಮದ್ದೂರು ಗ್ರಾಮಾಂತರ ಸಿಪಿಐ ವೆಂಕಟೇಗೌಡ ಮತ್ತು ತಂಡ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ತಿಪಟೂರಿನಲ್ಲಿ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಂತರ ಆರೋಪಿಗಳು ಹೈದರಾಬಾದ್, ಗೋವಾ, ಬೀದರ್, ಹಾಸನ ಇತರೆಡೆಗಳಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಅರಿತು ಹುಡುಕಾಟ ನಡೆಸಲಾಗಿತ್ತು. ಅಂತಿಮವಾಗಿ ತಿಪಟೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿತ್ತು. ಬಂಧಿತ ಆರೋಪಿಗಳಿಂದ 1.486 ಕೆ.ಜಿ ಚಿನ್ನಾಭರಣ, 1.70 ಲಕ್ಷ ರೂ ನಗದು ಸೇರಿದಂತೆ 83 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಪೇದೆ ಕೆಂಡಗಣ್ಣ ಸಹಕಾರ ನೀಡಿದ್ದರೆಂಬ ಆರೋಪದ ಮೇರೆಗೆ ಆತನನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.

ಇಬ್ಬರು ಮನೆಗಳ್ಳರ ಬಂಧನ: ಮನೆ ಬೀಗ ಮುರಿದು ಒಳ ನುಗ್ಗಿ ನಗದು ಸೇರಿದಂತೆ 67 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳಿಬ್ಬರನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಮಳವಳ್ಳಿ ತಾಲೂಕು ರಾಮಂದೂರು ಗ್ರಾಮದ ಅಶೋಕ್‌ಕುಮಾರ್ (28) ಹಾಗೂ ಚಲುವರಾಜು (26) ಬಂಧಿತ ಆರೋಪಿಗಳು.
ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿಯ ಅರ್ಜುನ್ ಎಂಬುವರ ಮನೆಯ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಆರೋಪಿಗಳು ವಾಲ್‌ಡ್ರೂಪ್‌ನ ಡ್ರಾನಲ್ಲಿಟ್ಟಿದ್ದ 26 ಗ್ರಾಂ ತೂಕದ ಚಿನ್ನದ ಒಡವೆಗಳು, 20 ಸಾವಿರ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಸಿಪಿಐ ಶ್ರೀಧರ್, ಪಿಎಸ್‌ಐಗಳಾದ ಮಹೇಂದ್ರ, ಸತೀಶ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ತೊರೆಕಾಡನಹಳ್ಳಿ ಮಾತ್ರವಲ್ಲದೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂತು. ಆರೋಪಿಗಳಿಂದ 67 ಲಕ್ಷ ರೂ ಮೌಲ್ಯದ 122 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಯತೀಶ್ ಹೇಳಿದರು.
70 ಲಕ್ಷ ರೂ ದೋಚಿದ್ದವನ ಸೆರೆ: ಹಣ ದ್ವಿಗುಣಗೊಳಿಸುವುದಾಗಿ ಮಹಿಳೆಯನ್ನು ನಂಬಿಸಿ 70 ಲಕ್ಷ ರೂ ದೋಚಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ತಿಳಿಸಿದರು.
ಆಂಧ್ರಪ್ರದೇಶದ ಕುಪ್ಪಂ ನಿವಾಸಿ ಬಿ.ಶಿವ ಅಲಿಯಾಸ್ ಶಿವಬುಡ್ಡಪ್ಪ ಅಲಿಯಾಸ್ ಸೂರ್ಯ ಅಲಿಯಾಸ್ ಸಾಂಭಶಿವ (42) ಬಂಧಿತ. ಈತ ಚಾಮರಾಜನಗರ ಸಿಂಗಾನಲ್ಲೂರು ಗ್ರಾಮದ ಮಹಿಳೆಯನ್ನು ಮದುವೆಯಾಗಿ ಅಲಲ್ಲಿಯೇ ವಾಸವಾಗಿದ್ದು, ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಂಷಾಪುರ ಗ್ರಾಮದ ಎಸ್. ಮೇರಿ ಎಂಬಾಕೆಯನ್ನು ನಂಬಿಸಿ ವಂಚಿಸಿದ್ದ ಎಂದರು.
ಮಳವಳ್ಳಿ ತಾಲೂಕು ಹೆಬ್ಬಣಿ ಗ್ರಾಮದ ನಿರ್ವಾಣೇಶ್ವರ ವಿರಕ್ತ ಮಠದ ಶಂಭುಲಿಂಗಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದ. ಅವರ ಮೂಲಕ ಶಿಂಷಾಪುರ ಗ್ರಾಮದ ಶ್ಯಾಲೋಮ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್‌ಗೆ ಸೇರಿದ ಎಸ್.ಮೇರಿ ಅವರನ್ನು ಪರಿಚಯಿಸಿಕೊಂಡಿದ್ದ. ಬಳಿಕ ಆಕೆಗೆ 1 ಕೋಟಿ ರೂ ನೀಡಿದರೆ ನಾನು 25 ಕೋಟಿ ರೂಗಳನ್ನು ಮಾಡಿಕೊಡುವುದಾಗಿ ನಂಬಿಸಿದ್ದ. ಈ ವೇಳೆ ನೋಟಿನ ಅಳತೆಗೆ ಬಿಳಿ ಪೇಪರ್‌ಗಳನ್ನು ಕಟ್ ಮಾಡಿ ಸಿದ್ಧಪಡಿಸಿಕೊಂಡು ಒಂದು ಚೀಲದಲ್ಲಿ ತಂದಿದ್ದ. ಈ ಸಂದರ್ಭದಲ್ಲಿ ಜಾದೂ ಪ್ರದರ್ಶನದ ಮಾದರಿ ತೋರಿಸಿ ನಂಬಿಸಿದ್ದ. ಈತನನ್ನು ನಂಬಿದ ಎಸ್. ಮೇರಿ ಅವರು ತನ್ನ ಸ್ನೇಹಿತರು, ಬಂಧುಗಳಿಂದ ಹಣವನ್ನು ಸಾಲ ಪಡೆದು ಸುಮಾರು 70 ಲಕ್ಷ ರೂ ಸಂಗ್ರಹಿಸಿದ್ದರು. ಬಳಿಕ ಜ.1ರಂದು ಹಣ ಕೊಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡಿದ್ದರು ಎಂದು ಹೇಳಿದರು.
70 ಲಕ್ಷ ರೂ ಆತನಿಗೆ ತೋರಿಸಿದರು. ಮನೆಗೆ ಬರುವ ಮುನ್ನ ಆರೋಪಿ ಸಿಹಿ ಪೊಂಗಲ್ ಮತ್ತು ಜ್ಯೂಸ್‌ನ್ನು ತಂದಿದ್ದ. ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪಿಸುವ ಪೌಡರನ್ನು ಹಾಕಿ ಮೇರಿಯವರಿಗೆ ಕುಡಿಯಲು ಕೊಟ್ಟಿದ್ದ. ಆಕೆ ಕುಡಿದ ಸ್ವಲ್ಪ ಹೊತ್ತಿನಲ್ಲೇ ಮೂರ್ಚೆ ಹೋಗಿದ್ದರು. ಆರೋಪಿ ಶಿವ ಅಲಿಯಾಸ್ ಸಾಂಭಶಿವ ತಕ್ಷಣ 70 ಲಕ್ಷ ರೂ. ಹಣವಿದ್ದ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮೇರಿ ಅವರು ಜ.26ರಂದು ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಪತ್ತೆಗೆ ಮಳವಳ್ಳಿ ಡಿವೈಎಸ್ಪಿ ಹಾಗೂ ಹಲಗೂರು ಸಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂತು. ಆರೋಪಿಯಿಂದ 43,88,500 ರೂ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಹಣವನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದಾಗಿ ತಿಳಿಸಿದ ಅವರು, ಆರೋಪಿ ಎಗರಿಸಿದ ಹಣದಿಂದ ಮೈಸೂರಿನಲ್ಲಿ ಮನೆಯೊಂದನ್ನು ಬೋಗ್ಯಕ್ಕೆ ಪಡೆದಿದ್ದಾನೆ. ಜತೆಗೆ ಮನೆಗೆ ಅಗತ್ಯವಾದ ಪೀಠೋಪಕರಣಗಳು ಇತರೆ ಸಾಮಗ್ರಿಗಳನ್ನೂ ಖರೀದಿಸಿದ್ದಾನೆ. ಈ ಪ್ರಕರಣ ಸೇರಿದಂತೆ ಈತನ ಮೇಲೆ ವಿವಿಧೆಡೆ 11 ಪ್ರಕರಣ ಇರುವುದಾಗಿ ಮಾಹಿತಿ ಇದೆ. ಇನ್ನು ಆರೋಪಿ ಪತ್ತೆಗೆ ಶ್ರಮಿಸಿದ ಸಿಪಿಐ ಬಿ.ಎಸ್.ಶ್ರೀಧರ್, ಬೆಳಕವಾಡಿ ಪಿಎಸ್‌ಐ ಅಶೋಕ್, ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ನಾಗೇಂದ್ರ, ರಿಯಾಜ್‌ಪಾಷ, ನಿಂಗರಾಜು, ಸಿದ್ದರಾಜು, ಮಹೇಶ, ಅವಿನಾಶ್, ಚೇತನ್, ರವಿಕಿರಣ್, ಲೋಕೇಶ್ ಅವರು ತನಿಖಾ ತಂಡದಲ್ಲಿದ್ದರು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net