

ಬೆಂಗಳೂರು: ನಿವೃತ್ತ ಯೋಧರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೆ ಜನರನ್ನು ಬೆದರಿಸಿದ್ದು, ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ನಿವೃತ್ತ ಸೈನಿಕ ರಾಜೇಶ್ ಕುಮಾರ್ ಪಾಂಡೆ ಬಂಧಿತ ಆರೋಪಿ.
ಸೇನೆಯಿಂದ ನಿವೃತ್ತಿಯಾದ ಬಳಿಕ ರಾಜೇಶ್ ಕುಮಾರ್ ಪಾಂಡೆ ಹೆಚ್ಎಎಲ್ ಬಳಿಯ ಆನಂದರಾಮ್ ರೆಡ್ಡಿ ಬಡಾವಣೆಯ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಂಪನಿಯಲ್ಲಿ ಸಿಬ್ಬಂದಿಗಾಗಿ ನಿನ್ನೆ ಪಾರ್ಟಿ ಆಯೋಜಿಸಿದ್ದ ವೇಳೆ ಈ ಘಟನೆ ನಡೆದಿದೆ.
ಪಾರ್ಟಿ ವೇಳೆ ಮ್ಯೂಸಿಕ್ ಸಿಸ್ಟಂ ಸೌಂಡ್ ತುಂಬಾ ಜೋರಾಗಿದ್ದ ಕಾರಣ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಆಗುತ್ತಿತ್ತು. ಆಗ ಅಪಾರ್ಟ್ಮೆಂಟ್ ನಿವಾಸಿ ಸತೀಶ್ ರೆಡ್ಡಿ ಎಂಬವರು ಅಲ್ಲಿಗೆ ತೆರಳಿ ಸೌಂಡ್ ಕಡಿಮೆ ಮಾಡುವಂತೆ ಕೋರಿದ್ದರು.
ಅವರು ಗಲಾಟೆ ಮಾಡಲು ಬಂದಿದ್ದಾರೆ ಎಂದು ಭಾವಿಸಿದ ರಾಜೇಶ್ ಕುಮಾರ್ ಪಾಂಡೆ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದರು. ಇದರಿಂದ ಹೆದರಿದ ಸತೀಶ್ ರೆಡ್ಡಿ ಓಡಿ ಹೋಗಿದ್ದರು. ಬಳಿಕ ಈ ಕುರಿತು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.