ಡಿಐಜಿ ಕಚೇರಿಯನ್ನೂ ಬಿಡದ ಕಳ್ಳ; ಸಿಕ್ಕಿಬಿದ್ದ ವೆಂಕಟೇಶ್​ ಪಿಳ್ಳ..

Crime
Published on


ಬೆಂಗಳೂರು: ಈತ ಅಂತಿಂಥ ಕಳ್ಳನಲ್ಲ, ಏಕೆಂದರೆ ಈತ ಡಿಐಜಿ ಕಚೇರಿಯನ್ನೂ ಬಿಡಲಿಲ್ಲ. ಅಲ್ಲಿದ್ದ ಯಂತ್ರಗಳನ್ನೇ ಕದ್ದಿದ್ದ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಐಜಿ ಕಚೇರಿಯ ಆವರಣದಲ್ಲಿ  ಯಂತ್ರಗಳನ್ನು ಕಳವು ಮಾಡಿದ್ದ ಈ ಆರೋಪಿಯ ಹೆಸರು ವೆಂಕಟೇಶ್ ಪಿಳ್ಳ.

ಈತನನ್ನು ಉಪ್ಪಾರಪೇಟೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ 1.7 ಲಕ್ಷ ರೂ. ಮೌಲ್ಯದ ಜನರೇಟರ್, ಕಟ್ಟಿಗೆ ಕತ್ತರಿಸುವ ಯಂತ್ರ, ಡ್ರಿಲ್ಲಿಂಗ್ ಮಷಿನ್ ಹಾಗೂ 15 ಮೊಬೈಲ್‌ಫೋನ್​ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವೆಂಕಟೇಶ್ ದುಶ್ಚಟಗಳಿಗೆ ದಾಸನಾಗಿದ್ದು, ಯಾವುದೇ ರೀತಿಯ ಕೆಲಸ ಮಾಡುತ್ತಿರಲಿಲ್ಲ. ಖರ್ಚಿಗೆ ಹಣಕ್ಕಾಗಿ ರಾತ್ರಿ ವೇಳೆ ಒಂಟಿ ಸವಾರರಿಂದ ಹಾಗೂ ಬಸ್ ನಿಲ್ದಾಣಗಳಲ್ಲಿ ಮೊಬೈಲ್ ಫೋನ್​ಗಳನ್ನು ದೋಚುತ್ತಿದ್ದ. ಅವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ.

ಕಬ್ಬನ್‌ಪಾರ್ಕ್ ಬಳಿ ಇರುವ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಐಜಿ ಕಚೇರಿಯ ಕಟ್ಟಡದಲ್ಲಿ ಅ. 13ರಂದು ಕಾಮಗಾರಿ ನಡೆಯುತ್ತಿತ್ತು. ಅಂದು ಸಂಜೆ ಕಾರ್ಮಿಕರು ಕೆಲಸ ಮುಗಿಸಿ ಜನರೇಟರ್, ಕಟ್ಟಿಗೆ ಕತ್ತರಿಸುವ ಯಂತ್ರ, ಡ್ರಿಲ್ಲಿಂಗ್ ಮಷಿನ್ ಮುಂತಾದ ಯಂತ್ರಗಳನ್ನು ಕೊಠಡಿಯೊಂದರಲ್ಲಿ

ಇಟ್ಟು ಬೀಗ ಹಾಕಿ ಹೋಗಿದ್ದರು.

ತಡರಾತ್ರಿ ಆ ಕೊಠಡಿಯ ಬೀಗ ಮುರಿದಿದ್ದ ಆರೋಪಿ ಎಲ್ಲ ಯಂತ್ರಗಳನ್ನು ಕದ್ದೊಯ್ದಿದ್ದ. ಮರುದಿನ ಬೆಳಗ್ಗೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ಕಳ್ಳತನ ಆಗಿರುವುದು ಗೊತ್ತಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ತನಿಖೆ ಕೈಗೊಳ್ಳಲಾಗಿತ್ತು. ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಇದನ್ನು ಆಧರಿಸಿ ತನಿಖೆ ಮುಂದುವರಿಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net