ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೆಕಾನಿಕ್ ಬಂಧನ

Rohith
Published on

ಬೆಂಗಳೂರು: ಮೋಜಿನ ಜೀವನ ನಡೆಸಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೆಕಾನಿಕ್‌ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಯ ಕಾವೇರಿ ನಗರದ ರೋಹಿತ್ ಅಲಿಯಾಸ್ ಕ್ಯಾಟ್ (23) ಬಂಧಿತ. ಆರೋಪಿಯಿಂದ 4.50 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ.15 ರಂದು ರಾಮಯ್ಯ ಲೇಔಟ್‌ನ ವೀರಣ್ಣ ಎಂಬುವರ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯಗಳ ಪರಿಶೀಲನೆ ವೇಳೆ ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಯ ಮುಖಚಹರೆ ಗುರುತು ಪತ್ತೆಯಾಗಿತ್ತು.  ಡಿ. 1ರಂದು ಶೆಟ್ಟಿಹಳ್ಳಿ ರೈಲ್ವೆಗೇಟ್ ಬಳಿ ಅನುಮಾನಸ್ಪದವಾಗಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ. ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ತಡೆದು ದಾಖಲಾತಿಗಳನ್ನು ಕೇಳಿದ್ದರು. ವಾಹನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ದಾಖಲೆಗಳಿರಲಿಲ್ಲ. ಕೂಡಲೇ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ವಾಹನ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ರೋಹಿತ್ ದ್ವಿಚಕ್ರ ವಾಹನ ಮೆಕಾನಿಕ್ ಆಗಿದ್ದ. ಈ ಹಿಂದೆ ದ್ವಿಚಕ್ರ ವಾಹನ ಕಂಪನಿಯೊಂದರ ಶೋರೂಂನಲ್ಲಿ ಸರ್ವೀಸ್ ಕೆಲಸ ಮಾಡುತ್ತಿದ್ದ. ಮೋಜಿನ ಜೀವನಕ್ಕೆ ಅಂಟಿಕೊಂಡಿದ್ದು, ಖರ್ಚಿಗೆ ಹಣಕ್ಕಾಗಿ ಕೃತ್ಯ ಎಸಗುತ್ತಿದ್ದ. ದ್ವಿಚಕ್ರ ವಾಹನ ಕಳ್ಳತನದ ಆರೋಪದ ಮೇಲೆ ಪೀಣ್ಯ ಪೊಲೀಸರಿಂದ ಬಂಧಿತನಾಗಿದ್ದ. ಪೀಣ್ಯ, ಚಂದ್ರಾಲೇಔಟ್, ಜ್ಞಾನಭಾರತಿ, ಸೋಲದೇವನಹಳ್ಳಿ, ಗಂಗಮ್ಮನಗುಡಿ, ತುಮಕೂರು ನಗರ, ಕುಂಬಳಗೋಡು, ತಾವರಕೆರೆ ಪೊಲೀಸ್ ಠಾಣೆ ಹಾಗೂ ಮೈಸೂರಿನ ವಿಜಯನಗರದಲ್ಲಿ 13 ದ್ವಿಚಕ್ರ ವಾಹನ ಕಳವು ಹಾಗೂ ಪೀಣ್ಯದಲ್ಲಿನ 2 ಕನ್ನಗಳವು ಮತ್ತು ಯಶವಂತಪುರದಲ್ಲಿ ನಡೆದಿದ್ದ 1 ಸುಲಿಗೆ ಪ್ರಕರಣ ಪತ್ತೆಯಾಗಿದ್ದವು. ಜೂನ್‌ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ತನ್ನ ಚಾಳಿ ಮುಂದುವರಿಸಿದ್ದ. ಇತ್ತೀಚೆಗೆ ಬಾಗಲಗುಂಟೆ, ಬ್ಯಾಡರಹಳ್ಳಿ, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 10 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net