

ತುಮಕೂರು: ನಕಲಿ ಎಟಿಎಂ ಕಾರ್ಡ್ ತಯಾರಿಸಿಕೊಂಡು ಗ್ರಾಹಕರ ಖಾತೆಯಿಂದ ಹಣ ತೆಗೆಯುತ್ತಿದ್ದ ಅಂತಾರಾಜ್ಯ ಖದೀಮರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಬ್ರಿಜ್ ಬನ್ ಸರೋಜ್ (35) ಹರಿಲಾಲ್ (33) ಬಂಧಿತರು. ಎಟಿಎಂ ಕಾರ್ಡ್ ನಮ್ಮ ಬಳಿಯೇ ಇದೆ. ಆದರೂ ಖಾತೆಯಿಂದ ಹಣ ಡ್ರಾ ಆಗಿದೆ ಎಂದು ತಿಪಟೂರಿನ ಎಚ್.ಕೆ.ಬಸವರಾಜು (13000 ರೂ.), ಹಾಲ್ಕುರಿಕೆ ಪರಮೇಶ್ವರಯ್ಯ (23000 ರೂ.), ದಿಬ್ಬೂರಿನ ಮೈಲಾರರಾವ್ (20000 ರೂ.), ವೀರಸಾಗರದ ಮಹಮ್ಮದ್ ಜಾಬೀರ್ ಹುಸೇನ್ (15500 ರೂ.) ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು. ದೂರುಗಳನ್ನು ದಾಖಲಿಸಿಕೊಂಡು ಸೈಬರ್ ಠಾಣೆ ವಿಶೇಷ ತಂಡ ಇಬ್ಬರು ಆರೋಪಿಗಳಿಂದ ನಕಲಿ ಎಟಿಎಂ ಕಾರ್ಡ್ ತಯಾರಿಸಲು ಬಳಸುತ್ತಿದ್ದ ಸಾಧನಗಳು, 2 ಲ್ಯಾಪ್‌ಟಾಪ್, 19 ವಿವಿಧ ಎಟಿಎಂ ಕಾರ್ಡ್ ಹಾಗೂ 53 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ಸಿಕ್ಕಿ ಬಿದ್ದಿದ್ದು ಹೇಗೆ?: ತಿಪಟೂರು, ಶಿರಾ, ಅರಸೀಕೆರೆ, ತುಮಕೂರು ಎಟಿಎಂಗಳಲ್ಲಿ ಹಣ ಡ್ರಾ ಆದ ಹಾಗೂ ಗ್ರಾಹಕರು ಕೊನೆಯದಾಗಿ ಹಣ ಡ್ರಾ ಮಾಡಿದ ಎಟಿಎಂಗಳ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ತುಮಕೂರಿನ ಚರ್ಚ್ ವೃತ್ತದ ಎಸ್‌ಬಿಐ ಎಟಿಎಂ ಬಳಿ ಇಬ್ಬರು ಅನುಮಾನಾಸ್ಪದವಾಗಿ ಕೀಬಂಚ್ ರೀತಿಯ ವಸ್ತುಗಳನ್ನು ಹಿಡಿದುಕೊಂಡು ನಿಂತಿದ್ದರಿಂದ ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬಯಲಾಗಿದೆ.
ವಂಚನೆ ತುಮಕೂರಿನಲ್ಲಿ ಮಾತ್ರವಲ್ಲ!: ತುಮಕೂರಿನ 4 ಪ್ರಕರಣವಲ್ಲದೆ ಕಲಬುರಗಿಯಲ್ಲಿ 6 ಕಡೆ, ರಾಯಚೂರು 4, ಲಿಂಗಸನೂರು 6, ಕುಷ್ಟಗಿ 5, ಸಿಂಗನೂರು 3, ಬೆಳಗಾವಿ 3, ಕುಡ್ಲ ಗ್ರಾಮ 2, ಯಾದಗಿರಿ 4, ಚಿತ್ರದುರ್ಗ 4, ದಾವಣಗೆರೆ 5, ಚಿಕ್ಕೋಡಿ 3, ಹಾವೇರಿ 16, ಭದ್ರಾವತಿ 4, ಶಿವಮೊಗ್ಗ 4, ತರೀಕೆರೆ 3, ಕಡೂರು 2, ರಾಣಿಬೆನ್ನೂರು 3, ಧಾರವಾಡ 4, ಹಿರಿಯೂರು 4 ಸೇರಿ ಒಟ್ಟು 85 ಪ್ರಕರಣಗಳಲ್ಲಿ ಈ ತಂಡ ಭಾಗಿಯಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡ ನಾಲ್ವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಕೃತ್ಯ ಎಸುತ್ತಿದ್ದ ಮಾಸ್ಟರ್ ಮೈಂಡ್‌ಗಳು: ಎಟಿಎಂಗೆ ಬರುವವರನ್ನು ಗುರಿಯಾಗಿಸಿಕೊಂಡು ಮ್ಯಾಗ್ನೆಟಿಕ್ ಸ್ಟ್ರೈಪ್ ರೀಡರ್ ಹಾಗೂ ಪೋರ್ಟಬಲ್ ಮ್ಯಾಗ್ನೆಟಿಕ್ ಕಾರ್ಡ್ ರೆಕಾರ್ಡರ್ ಸಾಧನದಿಂದ ಕಾರ್ಡ್ ಸ್ಕಾನ್ ಮಾಡಿಕೊಂಡು ಪಾಸ್‌ವರ್ಡ್ ತಿಳಿದುಕೊಂಡು ಹಣ ಡ್ರಾ ಮಾಡುತ್ತಿದ್ದರು ಎನ್ನಲಾಗಿದೆ.
ಸಾರ್ವಜನಿಕರು ಎಟಿಎಂ ಕೌಂಟರ್‌ಗಳಲ್ಲಿ ಕಾರ್ಡ್, ಪಾಸ್‌ವರ್ಡ್‌ಗಳನ್ನು ಅಪರಿಚಿತರ ಜತೆ ಹಂಚಿಕೊಳ್ಳಬಾರದು. ಸಹಾಯ ಪಡೆಯಲು ಯಾರನ್ನೂ ಬಯಸದೆ ಆಪರೇಟ್ ಮಾಡುವುದನ್ನು ಕಲಿಯಬೇಕು. ಡಾ.ಕೆ.ವಂಶಿಕೃಷ್ಣ ಎಸ್ಪಿ