ಖತರ್ನಾಕ್ ಕಳ್ಳನ ಬಂಧಿಸಿದ ಖಾಕಿ: 40 ಲಕ್ಷ ರೂ ಮೌಲ್ಯದ ವಸ್ತುಗಳು ವಶ

Police arrest dangerous thief Mandya
Published on

ಮಂಡ್ಯ: ಮನೆಗಳಿಗೆ ಕನ್ನಹಾಕಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿ ಆತನಿಂದ 40 ಲಕ್ಷ ರೂ ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಆಲೂರು ತಾಲೂಕು ಮುದಿಗೆರೆ ಗ್ರಾಮದ ಆರೋಪಿ ಎಂ.ವಿ.ರಂಗೇಗೌಡ ಅಲಿಯಾಸ್ ಸಂತೋಷ(37) ಬಂಧಿತ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೇ 18ರಂದು ನಾಗಮಂಗಲ ತಾಲೂಕು ಬಿದರಕೆರೆ ಗ್ರಾಮದ ಗಂಗೇಗೌಡ ಎಂಬುವರ ಮನೆ ಮುಂದೆ ಇಟ್ಟಿದ್ದ ಬೀಗದ ಕೀಲಿಕೈ ತೆಗೆದುಕೊಂಡು ಬೀಗ ತೆಗೆದು ಬಾಗಿಲನ್ನು ತೆಗೆದು ಬೀರುವಿನಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಆಭರಣ ಮತ್ತು 97,000 ರೂ ನಗದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಬಿಂಡಿಗನವಿಲೆ ಪೊಲೀಸ್ ಠಾಣೆಗೆ ಮೇ 20ರಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತನಿಖಾ ತಂಡವು ಆರೋಪಿಯ ಬೆನ್ನತ್ತಿ ಜೂ.1ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಹಾಸನ ಟೌನ್‌ನಲ್ಲಿ ರಂಗೇಗೌಡನನ್ನು ವಶಕ್ಕೆ ಪಡೆದಿದೆ. ಈತ ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಪ್ರಕರಣ, ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1, ತುರುವೆಕೆರೆ ಪೊಲೀಸ್ ಠಾಣೆ ಹಾಗೂ ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದರು.

ಆರೋಪಿಯಿಂದ 490 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ಕೃತ್ಯವೆಸಗಲು ಬಳಸಿದ್ದ ಟಿವಿಎಸ್ ಆವೆನೆಸ್ ಸ್ಕೂಟರ್ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು 40 ಲಕ್ಷ ರೂಗಳಾಗಿದೆ. ಪ್ರಕರಣ ಪತ್ತೆ ಮಾಡಿದ ನಾಗಮಂಗಲ ಗ್ರಾಮಾಂತರ ಠಾಣೆ ಸಿಪಿಐ ಕೆ.ಎಸ್.ನಿರಂಜನ, ಪಿಎಸ್‌ಐಗಳಾದ ವೈ.ಎನ್.ರವಿಕುಮಾರ್, ಟಿ.ಮಾರುತಿ, ಪ್ರಶಾಂತ್‌ಕುಮಾರ್, ಸಿಎಚ್‌ಸಿ ಪ್ರಶಾಂತ್‌ಕುಮಾರ್, ಮಧುಕುಮಾರ, ಇಂದ್ರಕುಮಾರ್, ರವಿಕಿರಣ್, ಲೋಕೇಶ್, ಸಿಪಿಸಿ ದಿನೇಶ್ ಅವನ್ನೊಳಗೊಂಡ ತಂಡವನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ನಾಗಮಂಗಲ ಉಪ ವಿಭಾಗದ ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ಕೆ.ಎಸ್.ನಿರಂಜನ, ಪಿಎಸ್‌ಐಗಳಾದ ವೈ.ಎನ್.ರವಿಕುಮಾರ್, ಟಿ.ಮಾರುತಿ ಇತರರಿದ್ದರು.

Police arrest dangerous thief Mandya
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net