

ವಿಜಯವಾಣಿ ಸುದ್ದಿಜಾಲ ಮಧುರೆ
ಹೆದ್ದಾರಿ ಡಾಬಾಗಳ ಬಳಿ ಕಾದು ಕುಳಿತು ಡಾಬಾಗೆ ಹೋಗಿ ಮರಳುವ ವಾಹನ ಸವಾರರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಖತರ್ನಾಕ್ ದರೋಡೆಕೋರರನ್ನು ದೊಡ್ಡಬೆಳವಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಲಕೃಷ್ಣ (32) ಹರ್ಷವರ್ಧನ್ (26) ಮತ್ತು ಅನಿಲ್ ಕುಮಾರ್(28) ಬಂಧಿತರು. ಆರೋಪಿಗಳಿಂದ 2 ದ್ವಿಚಕ್ರ ವಾಹನ, 2 ಐ ಫೋನ್, ಬೆಲೆ ಬಾಳುವ ಕೈಗಡಿಯಾರ ಹಾಗೂ 80 ಸಾವಿರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ರಾತ್ರಿ ವೇಳೆ ಹೆದ್ದಾರಿಗಳಲ್ಲಿನ ಡಾಬಾಗಳಲ್ಲಿ ಊಟಕ್ಕೆ ವಾಹನ ನಿಲ್ಲಿಸಿ ಹೋಗುವವರನ್ನೇ ಟಾರ್ಗೆಟ್ ಮಾಡುತ್ತಿದ್ದ ದುಷ್ಕರ್ಮಿಗಳು ಊಟ ಮುಗಿಸಿ ವಾಹನದ ಸಮೀಪ ಬರುತ್ತಿದ್ದಂತೆ ಏಕಾಏಕಿ ಮುಗಿಬಿದ್ದು ಮಾರಕಾಸಗಳನ್ನು ತೋರಿಸಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬಂಟಿಗಳೇ ಟಾರ್ಗೆಟ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ಹಾದು ಹೋಗಿರುವ ದಾಬಸ್‌ಪೇಟೆಯಿಂದ ಹೊಸಕೋಟೆವರೆಗಿನ ರಾಷ್ಟ್ರಿಯ ಹೆದ್ದಾರಿ 648 ದುಷ್ಕರ್ಮಿಗಳ ಅಡ್ಡೆಯಾಗಿತ್ತು. ತಂಡ ಕಟ್ಟಿಕೊಂಡಿದ್ದ ಆರೋಪಿಗಳು ಈ ಹೆದ್ದಾರಿಯುದ್ದಕ್ಕೂ ತಿರುಗಾಡುತ್ತಾ ಡಾಬಾಗಳ ಮೇಲೆ ಕಣ್ಣಿಡುತ್ತಿದ್ದರು. ರಾತ್ರಿ ವೇಳೆ ಡಾಬಾಗಳಿಗೆ ಊಟಕ್ಕೆ ಒಂಟಿಯಾಗಿ ಬರುವವರನ್ನೇ ಗುರಿಯಾಗಿಸಿಕೊಂಡು ದುಷ್ಕೃತ್ಯ ಎಸಗುತ್ತಿದ್ದರು. ಸುಲಿಗೆ ಮಾಡಿದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಾ ಕಾಲಕಳೆಯುತ್ತಿದ್ದ ಆರೋಪಿಗಳು ಹಣ ಖಾಲಿಯಾಗುತ್ತಿದ್ದಂತೆ ಮತ್ತೆ ದುಷ್ಕೃತ್ಯಗಳಿಗೆ ಕೈ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂನ್‌ಲೈಟ್ ಡಾಬಾ ಬಳಿ ಸುಲಗೆ: ಎರಡು ತಿಂಗಳಿಂದೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನದೇವಿ ಅಗ್ರಹಾರದ ಬಳಿಯಲ್ಲಿನ ಮೂನ್ ಲೈಟ್ ಡಾಬಾದಲ್ಲಿ ಊಟಕ್ಕೆ ಬಂದಿದ್ದವರನ್ನ ಬೆದರಿಸಿ ಸುಲಿಗೆ ಮಾಡಿಲಾಗಿತ್ತು, ಮೊಬೈಲ್, ನಗದು ಕಿತ್ತುಕೊಂಡಿದ್ದ ಖದೀಮರು ಮತ್ತು ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ ದೊಡ್ಡಬಳ್ಳಾಪುರ-ದೇವನಹಳ್ಳಿ ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ಅಲರ್ಟ್ ಆದ ದೊಡ್ಡಬೆಳವಂಗಲ ಪೊಲೀಸರು ಇನ್‌ಸ್ೆಕ್ಟರ್ ಡಾ.ನವೀನ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ರೂಪಿಸಿ ಆರೋಪಿಗಳ ಕೈಗೆ ಕೋಳ ತೊಡಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆಯವರು: ಬಂಧಿತ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ, ಇದರಲ್ಲಿ ಬಂಧಿತ ಬಾಲಕೃಷ್ಣ ವಿರುದ್ದ ರೌಡಿ ಶೀಟರ್ ತೆರೆದಿದ್ದು, ಬಾಲೃಕಷ್ಣ ಜತೆಗೆ ಅನಿಲ್ ಕುಮಾರ್ ಮೇಲೆ ಮಾದನಾಯಕನಹಳ್ಳಿ, ಮಂಡ್ಯ, ಪೀಣ್ಯ ಬಾಗಲಗುಂಟೆ, ಯಲಹಂಕ, ಕೆಂಗೇರಿ, ದೊಡ್ಡಬೆಳವಂಗಲ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.