

ಮಂಡ್ಯ: ಕೆಲಸದ ಒತ್ತಡ ಪ್ರತಿಯೊಬ್ಬರಿಗೂ ಕೂಡ ಸರ್ವೇ ಸಾಮಾನ್ಯ. ಇದರ ಮಧ್ಯೆಯೂ ಕೂಡ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿಯೊಬ್ಬರೂ ಸದೃಢ ಮನಸ್ಸು, ಆರೋಗ್ಯ, ದೇಹದ ಕಡೆ ಹೆಚ್ಚು ಗಮನಹರಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆ ಮೊದಲು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಆಗ ಮಾತ್ರ ದೇಶವನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದರು.
ಪೊಲೀಸ್ ಇಲಾಖೆಯಲ್ಲಿರುವ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಮಯದ ಪರಿವೇ ಇಲ್ಲದೆ ಹಗಲು, ರಾತ್ರಿ, ಬಿಸಿಲು, ಮಳೆ, ಚಳಿ ಎನ್ನದೆ ಸಮಾಜದ ರಕ್ಷಣೆಗಾಗಿ ಕಾಯಕಯೋಗಿಗಳಂತೆ ಕರ್ತವ್ಯ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಪೊಲೀಸ್ ಇಲಾಖೆ ಎಂದ ತಕ್ಷಣ ಪ್ರತಿಯೊಬ್ಬರ ಮನಸ್ಸಿನಲ್ಲೂ ಶಿಸ್ತು, ತ್ಯಾಗ ಹಾಗೂ ಸಮಾಜಕ್ಕಾಗಿ ಕಾರ್ಯನಿರತವಾಗಿ ಕೆಲಸ ಮಾಡುತ್ತಿರುವುದು ಮನಸ್ಸಿನಲ್ಲಿ ಮೂಡುತ್ತದೆ. ಆಗ ಅವರ ಮೇಲಿನ ಗೌರವ ಹಾಗೂ ಪ್ರೀತಿ ಇನ್ನಷ್ಟು ದುಪ್ಪಟ್ಟು ಆಗುತ್ತದೆ ಎಂದು ಹೇಳಿದರು.
ಕೆಲಸದ ಒತ್ತಡ ಇರಬಹುದು. ರಜೆಯಿಲ್ಲದ ದಿನಗಳು ಇರಬಹುದು. ಆದರೆ ಸಿಕ್ಕ ಸಮಯದಲ್ಲೇ ಕಾಯಕವನ್ನು ಮಾಡುತ್ತಲೇ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆಯಿರಿ. ನಮ್ಮ ದೇಹಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಆದ್ದರಿಂದ ದಿನದ 24 ಗಂಟೆಯಲ್ಲಿ ಕೇವಲ 1 ಗಂಟೆಯನ್ನಾದರು ಯೋಗಾಭ್ಯಾಸ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳುವುದರ ಜತೆಗೆ ಪೌಷ್ಟಿಕ ಆಹಾರ ಸೇವನೆ ಮಾಡುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ ಮಾತನಾಡಿ, ವಯಸ್ಸಿಗೆ ತಕ್ಕಂತೆ ದೇಹದ ತೂಕವನ್ನು ವೃದ್ಧಿಸಿಕೊಳ್ಳಿ. ತೂಕ ಹೆಚ್ಚಾದಷ್ಟೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ದೇಹದ ಸಮತೋಲನ ತೂಕವನ್ನು ಕಾಪಾಡಿಕೊಳ್ಳಿ. ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಕೂಡ ನಿಮಗಾಗಿ ಹಾಗೂ ಕುಟುಂಬದವರಿಗಾಗಿ ಸಮಯವನ್ನು ಮೀಸಲಿಡಿ. ಈಗೀನ ಯುಗ ತಂತ್ರಜ್ಞಾನದಿಂದ ಕೂಡಿರುವುದರಿಂದ ನಿಮ್ಮ ಮಕ್ಕಳಿಗೆ ಸಮಯ ನೀಡಲಿಲ್ಲ ಎಂದರೆ ಅವರ ಮನಸ್ಸು ತಂತ್ರಜ್ಞಾನದ ಕಡೆಯೇ ಹೆಚ್ಚು ಅವಲಂಬಿತವಾಗುತ್ತದೆ. ಆದ್ದರಿಂದ ಬಿಡುವಿನ ಸಮಯ ಮಾಡಿಕೊಂಡು ಸಂಸಾರದ ಜತೆಗೆ ಒಡನಾಟ ಇಟ್ಟುಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಎಸ್.ಇ.ಗಂಗಾಧರಸ್ವಾಮಿ ಇತರರಿದ್ದರು.