ಯುಗಾದಿ, ರಂಜಾನ್ ಹಬ್ಬಕ್ಕೆ ಪೊಲೀಸ್ ಅಲಾರ್ಟ್, ಮೊದಲೇ ಸಾರ್ವಜನಿಕರಿಗೆ ಎಚ್ಚರಿಕೆ

3-1.jpg
Published on

ಚಿಕ್ಕಬಳ್ಳಾಪುರ: ಯುಗಾದಿ ಹಾಗೂ ರಂಜಾನ್ ಹಬ್ಬದ ಆಚರಣೆ, ಸಾಲು ರಜೆಗಳ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಮುಂಜಾಗ್ರತಾ ಕ್ರಮಗಳಲ್ಲಿ ತೊಡಗಿದೆ.
ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳ ಮೂಲಕ ಯುಗಾದಿ ಹಬ್ಬದ ಹೆಸರಿನಲ್ಲಿ ಯಾವುದೇ ರೀತಿಯ ಜೂಜಾಟ, ಕೋಳಿ ಪಂದ್ಯ, ಮಟ್ಕಾ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಜನರಿಗೆ ಎಚ್ಚರಿಕೆಯ ಮಾಹಿತಿ ನೀಡಲಾಗುತ್ತಿದೆ. ಹಾಗೆಯೇ ಶಾಂತಿ ಸಭೆಗಳನ್ನು ಕೈಗೊಂಡು ವಿವಿಧ ಸಮುದಾಯಗಳ ಮುಖಂಡರ ಪಾಲಿಸಬೇಕಾದ ನಿಯಮಗಳು, ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿ ಹೇಳಲಾಗುತ್ತಿದೆ.


*ಸಂಭ್ರಮದ ಹಬ್ಬ
ಮಾ.31 ಯುಗಾದಿ ಹಬ್ಬ, ಏ.1 ರಂಜಾನ್ ಹಬ್ಬ ಇದೆ. ಈಗಾಗಲೇ ಸಂಭ್ರಮದಿಂದ ಯುಗಾದಿ ಹಬ್ಬದ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಹಲವೆಡೆ ಮಾರಾಟ ಮತ್ತು ಖರೀದಿಯಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ. ಇದರ ನಡುವೆ ವಿವಿಧ ಇಲಾಖೆಯ ಅಧಿಕಾರಿಗಳು ಹಬ್ಬಕ್ಕೆ ಎರಡು ದಿನ ಮೊದಲೇ ರಜೆ ಹಾಕಿಕೊಂಡು ಹುಟ್ಟೂರಿಗೆ ಕುಟುಂಬದೊಂದಿಗೆ ತೆರಳಿದ್ದು ಪ್ರತಿ ವರ್ಷದಂತೆ ವಿವಿಧ ಸಂಪ್ರದಾಯಗಳ ಆಚರಣೆ, ಮನರಂಜನೆಯ ಚಟುವಟಿಕೆಯಲ್ಲಿ ಖುಷಿಯಲ್ಲಿ ಮಿಂದೇಳಲು ಎದುರು ನೋಡಲಾಗುತ್ತಿದೆ. ಮತ್ತೊಂದೆಡೆ ರೋಜಾ ಉಪವಾಸದಲ್ಲಿ ತೊಡಗಿರುವ ಮುಸ್ಲಿಂ ಬಾಂಧವರು ಇಫ್ತಿಯಾರ್ ಕೂಟ, ಸಾಮೂಹಿಕ ಪ್ರಾರ್ಥನೆ ಸೇರಿದಂತೆ ಧಾರ್ಮಿಕ ವಿವಿಧ ಚಟುವಟಿಕೆಯೊಂದಿಗೆ ರಂಜಾನ್ ಆಚರಿಸುತ್ತಿದ್ದಾರೆ.

*ಅಪರಾಧ ಚಟುವಟಿಕೆಗೆ ಬ್ರೇಕ್
ಸಾಮಾನ್ಯವಾಗಿ ಯುಗಾದಿ ಹಬ್ಬದ ಬಳಿಕ ಬಾಡೂಟ ಸವಿಯುವ ವಸ್ತೊಡಕು ಆಚರಣೆಯ ಸಂದರ್ಭದಲ್ಲಿ ಇಸ್ಪೀಟ್ ಜೂಜು, ಕುರಿ, ಟಗರು ಹಾಗೂ ಕೋಳಿ ಪಂದ್ಯ, ಮದ್ಯಾರಾಧನೆ ಸಾಮಾನ್ಯವಾಗಿರುತ್ತದೆ. ಕುಡಿದ ನಶೆಯಲ್ಲಿ ಪರಸ್ಪರ ನಿಂದನೆ, ಗಲಾಟೆ, ಹಲ್ಲೆ ಸೇರಿದಂತೆ ಅಹಿತಕರ ಹಾಗೂ ಅಪರಾಧ ಟನೆಗಳು ನಡೆಯುತ್ತವೆ. ಮತ್ತೊಂದೆಡೆ ಸಾಮೂಹಿಕ ಪ್ರಾರ್ಥನೆಯ ನೆಪದಲ್ಲಿ ಕೆಲ ಪುಂಡರು ಬೀದಿದೀಪಗಳನ್ನು ಹೊಡೆದು ಹಾಕುವುದು, ಜೋರಾಗಿ ಕಿರುಚುವುದು, ಬೈಕ್ ವ್ಹೀಲಿಂಗ್ ಸೇರಿದಂತೆ ಕಿರಿಕಿರಿಯನ್ನುಂಟು ಮಾಡುತ್ತಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆ ಚುರುಕು, ಜನದಟ್ಟಣೆಯ ಸ್ಥಳಗಳಲ್ಲಿ ಭದ್ರತೆಗೆ ಆಯಾ ಭಾಗದಲ್ಲಿ ಸಿಬ್ಬಂದಿ ನಿಯೋಜನೆ ಸೇರಿದಂತೆ ವಿವಿಧ ಕ್ರಮಗಳನ್ನು ಪೊಲೀಸ್ ಇಲಾಖೆಯು ಕೈಗೊಳ್ಳುತ್ತಿದ್ದು ಈಗಾಗಲೇ ಗಲ್ಲಿ ಗಲ್ಲಿಯಲ್ಲಿ ಪೊಲೀಸರು ಧ್ವನಿವರ್ಧಕಗಳ ಮೂಲಕ ನಿಯಮಪಾಲನೆಯ ಬಗ್ಗೆ ತಿಳಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ನಗರ, ಗ್ರಾಮಾಂತರ ಠಾಣೆ ಮತ್ತು ಗೌರಿಬಿದನೂರು ಭಾಗದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದ ದೃಶ್ಯ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net