ಜಿಲ್ಲೆಯಲ್ಲಿ ಪೊಲೀಸರು ಹೈ ಅಲರ್ಟ್

police
Published on

ಮಡಿಕೇರಿ:

ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರಮುಖ ಬ್ಯಾಂಕರ್‌ಗಳು, ಹಣಕಾಸು ಸಂಸ್ಥೆ ಪ್ರಮುಖರು ಹಾಗೂ ಚಿನ್ನಾಭರಣ ಅಂಗಡಿ ಮಾಲೀಕರ ಜತೆ ಸಭೆ ನಡೆಸಿ ಪ್ರಮುಖ ಸೂಚನೆಗೆಳನ್ನು ಕೊಡಲಾಗಿದೆ. ಜಿಲ್ಲೆಗೆ ಹೊಂದಿಕೊAಡAತೆ ಇರುವ ಕೇರಳದ ಗಡಿ ಭಾಗಗಳಲ್ಲಿ ತೀವ್ರ ನಿಗಾ ಇಡಲಾಗಿದೆ.

ದಿನಂಪ್ರತಿ ರಾಜ್ಯದ ಒಂದಿಲ್ಲೊAದು ಕಡೆಯಿಂದ ವರದಿಯಾಗುತ್ತಿರುವ ದರೋಡೆ ಪ್ರಕರಣಗಳು ಜನಸಾಮಾನ್ಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕೊಡಗಿನಲ್ಲೂ ಆಗಾಗ್ಗೆ ಇಂಥ ಘಟನೆಗಳು ನಡೆಯುತ್ತಲೇ ಇರುತ್ತದೆ. ಈಗಂತೂ ಕಾಫಿ ಕೊಯ್ಲು ಸೀಸನ್ ಆಗಿದ್ದು, ದರವೂ ಹೆಚ್ಚು ಇರುವುದರಿಂದ ಕಾಫಿ ಕಳ್ಳರ ಹಾವಳಿಯೂ ಜಾಸ್ತಿ ಆಗಿದೆ. ಹಣದ ವಹಿವಾಟು ಹೆಚ್ಚು ಪ್ರಮಾಣದಲ್ಲಿ ಆಗುತ್ತಿರುವುದರಿಂದ ರಾಜ್ಯದ ಇತರೆಡೆಗಳಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಕೊಡಗಿನಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಕೊಡಗಿನ ಬಹುತೇಕ ಭಾಗವನ್ನು ಕೇರಳದ ಗಡಿಭಾಗಗಳು ಆವರಿಸಿಕೊಂಡಿರುವುದರಿAದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಸುಲಭವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊAಡಿರುವ ಕುಟ್ಟ, ಮಾಕುಟ್ಟ, ಕರಿಕೆ, ತಿತಿಮತಿ ಸೇರಿದಂತೆ ಎಲ್ಲ ಆಯಕಟ್ಟಿನ ಚೆಕ್‌ಪೋಸ್ಟ್ಗಳಲ್ಲೂ ತೀವ್ರ ನಿಗಾ ಇರಿಸಲಾಗಿದೆ. ಬ್ಯಾಂಕ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳ ಬಳಿ ಪೊಲೀಸ್ 'ಬೀಟ್ ಪಾಯಿಂಟ್' ಹಾಕಲಾಗಿದೆ. ರಾತ್ರಿ ವೇಳೆಯೂ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ 'ಬೀಟ್ ಪಾಯಿಂಟ್' ತಲುಪಿ ಪರಿಶೀಲಿಸಲು ಸೂಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಈ ವಿಷಯದಲ್ಲಿ ಸ್ವತಃ ಕಾಳಜಿ ತೋರಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಕುಶಾಲನಗರದಲ್ಲೂ ಚೆಕ್‌ಪೋಸ್ಟ್ ಹಾಕುವ ಸೂಚನೆ ಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಬ್ಯಾಂಕ್‌ಗಳು, ಸಹಕಾರ ಸಂಘದ ಬ್ಯಾಂಕ್‌ಗಳು, ಫೈನಾನ್ಸ್ ಸಂಸ್ಥೆಗಳ ವ್ಯವಸ್ಥಾಪಕರು ಹಾಗೂ ಆಭರಣ ಮಳಿಗೆ ಮಾಲೀಕರ ಜತೆ ಮಂಗಳವಾರ (ಜ.21) ಸಭೆಯನ್ನೂ ನಡೆಸಲಾಗಿದೆ. ತಮ್ಮ ಸಂಸ್ಥೆಗಳಲ್ಲಿ ಗರಿಷ್ಠ ಭದ್ರತೆಗೆ ಆದ್ಯತೆ ಕೊಡಬೇಕು. ಯಾವುದೇ ಕಾರಣಕ್ಕೂ ಭದ್ರತಾ ವಿಷಯದಲ್ಲಿ ಲೋಪ ಉಂಟಾಗದAತೆ ಎಚ್ಚರ ವಹಿಸಬೇಕು ಎಂದು ಈ ಸಭೆಯಲ್ಲಿ ಎಸ್‌ಪಿ ಕೆ. ರಾಮರಾಜನ್ ಸೂಚಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಅಂಗಡಿಗಳು ಹಾಗೂ ಸಂಸ್ಥೆಗಳ ಸುರಕ್ಷತೆಯನ್ನು ಮೊದಲ ಆದ್ಯತೆ ವಿಷಯವನ್ನಾಗಿ ಪರಿಗಣಿಸಬೇಕು. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಸಿಸಿಟಿವಿ ಕ್ಯಾಮೆರಾಗಳ ವಿಷಯವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿದ ಎಸ್‌ಪಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡರೆ ಸಾಲದು ಕಾಲಕಾಲಕ್ಕೆ ಅದರ ನಿರ್ವಹಣೆಯನ್ನೂ ಮಾಡಬೇಕು.

ಹಗಲು ಮತ್ತು ರಾತ್ರಿಯ ದೃಶ್ಯಗಳು ಸ್ಪಷ್ಟವಾಗಿ ಸಿಸಿಟಿವಿಗಳಲ್ಲಿ ದಾಖಲಾಗುವಂತಿರಬೇಕು. ಈ ದೃಶ್ಯಗಳು ಕನಿಷ್ಠ ಎಂದರೂ 6 ತಿಂಗಳ ಕಾಲ ಲಭ್ಯವಿರುವಂಥ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಸಿಸಿಟಿವಿಗಳ ದೃಶ್ಯಾವಳಿಗಳನ್ನು ಕ್ಲೌಡ್ ಸ್ಟೋರೇಜ್ ಹಾಗೂ ಬದಲಿ ಸಂಗ್ರಾಹಕದಲ್ಲೂ ಸೇವ್ ಮಾಡಿಟ್ಟುಕೊಳ್ಳಬೇಕು.

ಉತ್ತಮ ಗುಣಮಟ್ಟದ ಕರೆಗಂಟೆ ಅಳವಡಿಸಿಕೊಂಡಿರಬೇಕು.

ಅನಧಿಕೃತ ವ್ಯಕ್ತಿಗಳ ಪ್ರವೇಶದ ಸಂದರ್ಭದಲ್ಲಿ ಆದಷ್ಟು ಹೆಚ್ಚು ಜಾಗರೂಕರಾಗಿರಬೇಕು. ಬ್ಯಾಂಕ್‌ಗಳು ಮತ್ತು ಎಲ್ಲ ಬಗೆಯ ಹಣಕಾಸು ಸಂಸ್ಥೆಗಳು ತಮ್ಮ ತಮ್ಮ ಪ್ರಧಾನ ಕಚೇರಿ ಹೇಳಿರುವ ಶಿಷ್ಟಾಚಾರವನ್ನು ಚಾಚೂ ತಪ್ಪದೇ ಪರಿಪಾಲಿಸಬೇಕು. ಭದ್ರತಾ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಆಭರಣದ ಅಂಗಡಿಗಳ ಸುತ್ತಮುತ್ತ ಯಾವುದೇ ವಿಧವಾದ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡು ಬಂದರೆ ಕೂಡಲೇ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಎಸ್‌ಪಿ ಸಲಹೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅಪರಾಧ ಚಟುವಟಿಕೆಗಳನ್ನು ನಡೆಸಲು ದರೋಡೆಕೋರರು ಹಿಂದೇಟು ಹಾಕುತ್ತಾರೆ. ಹಾಗಾಗಿ, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಆಭರಣದ ಅಂಗಡಿಗಳ ಮಾಲೀಕರು ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕಾ ಯೋಜನೆಯಡಿ ತಮ್ಮ ವ್ಯಾಪ್ತಿಯ ರಸ್ತೆಗಳು, ವೃತ್ತಗಳು ಹಾಗೂ ಆಯಾಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ಆಭರಣದ ಅಂಗಡಿಗಳಲ್ಲಿ ತುರ್ತು ಸಹಾಯವಾಣಿ 112, ಪೊಲೀಸ್ ನಿಯಂತ್ರಣ ಕಚೇರಿ, ಸ್ಥಳೀಯ ಪೊಲೀಸ್ ಠಾಣೆ, ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಮತ್ತಿತ್ತರ ಪೊಲೀಸ್ ಅಧಿಕಾರಿಗಳ ದೂರವಾಣಿ, ಮೊಬೈಲ್ ಸಂಖ್ಯೆಗಳ ಫಲಕಗಳನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಹಾಕಿಸಬೇಕು ಎನ್ನುವ ಸೂಚನೆಗಳನ್ನು ಕೊಡಲಾಗಿದೆ.

ಜಿಲ್ಲೆಯಲ್ಲಿ ದಿನದ 24 ಗಂಟೆಗಳ ಕಾಲವೂ ಜಿಲ್ಲಾ ಸಶಸ್ತç ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ರಾತ್ರಿ ವೇಳೆ ಸೇರಿದಂತೆ ಯಾವುದೇ ಸಮಯದಲ್ಲಿಯೂ ಸಹಾಯ ಕೋರಿ ಕರೆ ಬಂದ ತಕ್ಷಣ ಕಾರ್ಯಾಚರಣೆಗೆ ಅನುವಾಗಿರುವಂತೆ ಸಿಬ್ಬಂದಿಗೆ ಸೂಚನೆ ಕೊಡಲಾಗಿದೆ. ಸಶಸ್ತ್ರಧಾರಿ ರಕ್ಷಣಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನಿಯೋಜಿಸಿಕೊಂಡಿರಲೇಬೇಕು. ಅವರು ಸಹ ಸನ್ನದ್ಧ ಸ್ಥಿತಿಯಲ್ಲಿಯೇ ಇರಬೇಕು. ಉತ್ತಮ ಗುಣಮಟ್ಟದ ಸೈರನ್‌ನ್ನು ಅಳವಡಿಸಿಕೊಳ್ಳಬೇಕು. ಸ್ವಲ್ಪ ದುಬಾರಿ ಎನಿಸಿದರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ದರೋಡೆಕೋರರಿಗೆ ಆಹ್ವಾನ ನೀಡಿದಂತೆ ಎಂಬುದನ್ನು ಮರೆಯಬಾರದು ಎನ್ನುವ ಸಲಹೆಯನ್ನು ಹಣಕಾಸು ಸಂಸ್ಥೆಗಳಿಗೆ ಪೊಲೀಸರು ನೀಡಿದ್ದಾರೆ.

ಚೆಕ್‌ಪೋಸ್ಟ್ಗಳಲ್ಲಿ ತೀವ್ರ ನಿಗಾ ಇರಿಸಿದ್ದರೆ, ಬ್ಯಾಂಕುಗಳು, ಆಭರಣದ ಅಂಗಡಿಗಳ ಬಳಿ ಆಗಿದ್ದಾಂಗ್ಗೆ ಪೊಲೀಸರು ಸುಳಿಯುತ್ತಿದ್ದರೆ, ಪೊಲೀಸ್ ಗಸ್ತು ವಾಹನ ನಿರಂತರವಾಗಿ ಸಂಚರಿಸುತ್ತಿದ್ದರೆ ಎಂಥದ್ದೇ ದರೋಡೆಕೋರನಿಗೂ ದರೋಡೆ ಮಾಡಲು ಧೈರ್ಯ ಬರುವುದಿಲ್ಲ. ಹಾಗಾಗಿ, ಪೊಲೀಸರು ತಮ್ಮ ದೈನಂದಿನ ಗಸ್ತು ಕಾರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು, ಆಭರಣ ಅಂಗಡಿ ಮಾಲೀಕರ ಜೊತೆ ಈಗಾಗಲೇ ಸಭೆ ನಡೆಸಿ ಸುರಕ್ಷತೆ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಗಿದೆ. ದಿನದ 24 ಗಂಟೆಗಳ ಕಾಲ ಜಿಲ್ಲಾ ಸಶಸ್ತ್ರಧಾರಿ ಪೊಲೀಸ್ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗುವುದು. ಎಲ್ಲೆಡೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಣ ಸಾಗಿಸುವÀ ವಾಹನಕ್ಕೆ ತಮ್ಮ ಪ್ರಧಾನ ಕಚೇರಿಗಳಿಂದ ನೀಡಲಾಗುವ ಶಿಷ್ಟಾಚಾರದ ನಿಯಮಗಳನ್ವಯ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಲಾಗಿದೆ.

ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಡಗು

ಪೊಲೀಸ್ ಗುಪ್ತಚರ ವಿಭಾಗ ಇನ್ನಷ್ಟು ಚುರುಕುಗೊಳ್ಳಬೇಕು. ಹಣಕಾಸು ಸಂಸ್ಥೆಗಳವರು ಸೈರನ್ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು. ದರೋಡೆ ಯತ್ನ ನಡೆಯುತ್ತಿದ್ದಂತೆ ತಕ್ಷಣವೇ ಸೈರನ್ ಮೊಳಗಿಸುವಂಥ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜನರೂ ಪೊಲೀಸರಿಗೆ ಮಾಹಿತಿ ನೀಡಬೇಕು.

ಬಿ.ಆರ್. ನಾಗೇಂದ್ರಪ್ರಸಾದ್, ಅಧ್ಯಕ್ಷ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net