

ಮಡಿಕೇರಿ:
ಪ್ರಸಕ್ತ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಸಾರ್ವಜನಿಕರ ನೆಮ್ಮದಿ, ಕೋಮು ಮತ್ತು ಮತೀಯ ಸೌಹಾರ್ದತೆಗೆ ಭಂಗ ತಂದಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು ೧೩ ಪ್ರಕರಣಗಳು ದಾಖಲಾಗಿದ್ದು ೧೩ ಜನರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಎಸ್‌ಪಿ ರಾಮರಾಜನ್ ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ನಡೆದ ನಂತರ ಕೊಡಗು ಜಿಲ್ಲೆಯಲ್ಲಿ ಅನಾಮಧೇಯ ವ್ಯಕ್ತಿಗಳು ಬೇರೆ ವ್ಯಕ್ತಿಗಳ ಹೆಸರಿನ ಫೇಸ್‌ಬುಕ್‌ಗಳಲ್ಲಿ ಸುಳ್ಳು ಖಾತೆಯನ್ನು ತೆರೆದು ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಶಾಂತಿ ಭಂಗವನ್ನುಂಟುಮಾಡುವ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕದಡುತ್ತಿರುವ ಪ್ರಕರಣಗಳು ಕಂಡುಬರುತ್ತಿದೆ. ಸಾರ್ವಜನಿಕರು ಯಾವುದೇ ಅಪಪ್ರಚಾರವಿರುವ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಅಪ್, ಟ್ವಿಟರ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿ ಕೋಮು,ಮತೀಯ ಗಲಭೆಗಳು ನಡೆಯುವಂತೆ ಸಾರ್ವಜನಿಕರನ್ನು ಪ್ರಚೋದಿಸುವುದು, ಸಾರ್ವಜನಿಕರಲ್ಲಿ ಶಾಂತಿ ಭಂಗವನ್ನುಂಟು ಮಾಡುವುದು ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಕದಡುವಂತೆ ಮಾಡುವುದು ಇತ್ಯಾದಿಗಳನ್ನು ಯಾವುದೇ ವ್ಯಕ್ತಿಗಳು ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖಾ ವತಿಯಿಂದ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟುಮಾಡಲು ಅವಕಾಶ ಮಾಡಬಾರದು ಎಂದು ಮನವಿ ಮಾಡಿದ್ದಾರೆ.