ವಿಶ್ವಾಸ ಹೆಚ್ಚಲು ಪೊಲೀಸರ ಸಹಕಾರ ಅವಶ್ಯ

21-klr-1
Published on

ಕೋಲಾರ: ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಮೌಲ್ಯಯುತವಾಗಿ ಕಾರ್ಯನಿರ್ವಹಿಸಲು ಹಾಗೂ ವಿಶ್ವಾಸ ಬರಲು ಪೊಲೀಸ್ ಇಲಾಖೆಯಿಂದ ಉತ್ತಮ ಸಹಕಾರದ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್. ರಘುನಾಥ್ ಅಭಿಪ್ರಾಯಪಟ್ಟರು.

ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ 61ನೇ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಗೌರವ ರಕ್ಷೆ ಸಲ್ಲಿಸಿ ಮಾತನಾಡಿ, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನ್ಯಾಯಾಂಗದ ವ್ಯವಸ್ಥೆಗಳು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದರು.

ದೇಶಕ್ಕಾಗಿ ಪ್ರಾಣ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ಅರ್ಥಪೂರ್ಣವಾ

ಗಿದ್ದಾಗ ಅದರ ಮೌಲ್ಯ ಹೆಚ್ಚುತ್ತದೆ ಎಂಬುದಕ್ಕೆ ಪೊಲೀಸ್ ಹುತಾತ್ಮರ ದಿನಾಚರಣೆಯೇ ನಿದರ್ಶನ. ದೇಶದಲ್ಲಿ ಆಚರಿಸುವ ಐದು ಹುತಾತ್ಮರ ದಿನಾಚರಣೆಗಳಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯೂ ಒಂದು ಎಂದರು.

ದೇಶದ ಎಲ್ಲ ರಾಜ್ಯಗಳಲ್ಲೂ ಸಾಕಷ್ಟು ಪೊಲೀಸರು ಸೇವೆಯಲ್ಲಿ ಆತ್ಮಾರ್ಪಣೆ ಮಾಡಿಕೊಂಡಿರುವುದನ್ನು ನೆನೆದರೆ ಹೃದಯ ತುಂಬಿ ಬರುತ್ತದೆ. ಪೊಲೀಸ್ ಇಲಾಖೆ ಮತ್ತು ಸೇನೆೆಗೆ ಯುವಕರು ಜೀವನಾಧಾರದ ಕಾರಣಕ್ಕಾಗಿ ಸೇರಬಾರದು. ದೇಶ ಸೇವೆಯ ಕಾಳಜಿ ಹೊಂದಿ ಜೀವನದ ಸಾರ್ಥಕತೆ ಮೆರೆಯುವಂತಾಬೇಕು. ಸಾವು ಸಹಜವಾದರೂ ಸಾವಿನಲ್ಲಿ ಸಾರ್ಥಕತೆ ಮೆರೆಯುವಂತಾಗಬೇಕು ಎಂದರು.

ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರ ಶಿಕ್ಷೆಗೆ ಒಳಪಡುವಂತೆ ಮಾಡಿ ಸಾಮಾಜಿಕ ನ್ಯಾಯ ದೊರಕಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾ ರಕ್ಷಣಾಧಿಕರಿ ಜಾಹ್ನವಿ ಉಪಸ್ಥಿತರಿದ್ದರು. ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಪೊಲೀಸ್ ಹುತಾತ್ಮರ ಇತಿಹಾಸ ವಾಚಿಸಿ ಹುತಾತ್ಮರ ಅಂಕಿ ಅಂಶ ವಿವರಿಸಲಾಯಿತು. ಹುತಾತ್ಮರಿಗೆ ಗೌರವ ರಕ್ಷೆ ಮತ್ತು ಶ್ರದ್ಧಾಂಜಲಿ ಹಾಗೂ ಪೊಲೀಸರಿಂದ ಕವಾಯತು ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net