

ಮಡಿಕೇರಿ:
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಅನಾಹುತಗಳನ್ನು ಎದುರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಸ್‌ಪಿ ಕೆ. ರಾಮರಾಜನ್ ತಿಳಿಸಿದ್ದಾರೆ. ಕೊಡಗಿನಲ್ಲಿ ಹಲವು ವರ್ಷಗಳ ನಂತರ ಈ ಜೂನ್‌ನಲ್ಲಿ ಅತೀ ಹೆಚ್ಚು ಮಳೆಯಾಗಿದೆ.
ಮತ್ತೆ ಕೂಡ ಮಳೆ ಮುಂದುವರಿದಿದ್ದು ನದಿ, ಜಲಾಶಯ, ಕೆರೆ, ತೋಡು, ಹಳ್ಳ ಇತರೇ ನೀರಿನ ಮೂಲಗಳು ಈಗಾಗಲೇ ತುಂಬಿ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಯಾವುದೇ ರೀತಿಯ ಪಕೃತಿ ವಿಕೋಪ ಉಂಟಾದಲ್ಲಿ ಮುನ್ನೆಚ್ಚಾರಿಕಾ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲೆ ಎಲ್ಲಾ ಪಿಎಸ್‌ಐ, ಸಿಪಿಐ, ಪಿಐ, ಡಿಎಸ್ಪಿ ಜತೆ ಮಂಗಳವಾರ (ಜು.1) ಸಭೆ ನಡೆಸಿ ಪ್ರಕೃತಿ ವಿಕೋಪ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಠಾಣೆ ಮತ್ತು ಗ್ರಾಮ ಬೀಟ್ ವ್ಯಾಪ್ತಿಯಲ್ಲಿ ಸ್ವಯಂಸೇವಕರನ್ನು ಗುರುತಿಸಿ ಅವರ ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು. ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ದರಾಗಿರುವ ನಿಟ್ಟಿನಲ್ಲಿ ಮತ್ತು ಕೈಗೊಳ್ಳಬೇಕಾಗ ಕ್ರಮಗಳ ಕುರಿತು ಸ್ವಯಂಸೇವಕರೊAದಿಗೆ ಠಾಣಾ ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ಸಲಹೆ ನೀಡಬೇಕು. ಠಾಣಾ ವ್ಯಾಪ್ತಿಯಲ್ಲಿ ಲಭ್ಯವಿರುವ ಜೆಸಿಬಿ, ಕ್ರೇನ್, ಟೋಯಿಂಗ್ ವಾಹನ, ವುಡ್ ಕಟ್ಟರ್, 4*4 ಜೀಪ್ ವಿವರ ಹಾಗೂ ಇವರ ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘನೆಯ ಸ್ವಯಂಸೇವಕರು ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಯೂ ಮನವಿ ಮಾಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಯಲ್ಲಿ ಪಾಲ್ಗೊಳ್ಳಲು ಇಚ್ಚೆಯುಳ್ಳವರು ತಮ್ಮ ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆಯನ್ನು ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಮೊಬೈಲ್ ಸಂಖ್ಯೆ 8277958444 ಗೆ ನೇರವಾಗಿ ನೀಡುವಂತೆ ಕೋರಿದ್ದಾರೆ. ಈ ವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ ಸ್ವಯಂಸೇವಕರ ಪಟ್ಟಿಯಲ್ಲಿ ಸೇರಿಸಿಕೊಂಡು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗುವುದು.
ಸಾರ್ವಜನಿಕರು ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಪಕೃತಿ ವಿಕೋಪ ಉಂಟಾದ ಸ್ಥಳ ಹಾಗೂ ನೆರವಿನ ಅವಶ್ಯಕತೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಮೊಬೈಲ್ ಸಂಖ್ಯೆ 8277958444 ಗೆ ಮಾಹಿತಿಯನ್ನು ನೀಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆಯೂ ಎಸ್‌ಪಿ ಕೋರಿದ್ದಾರೆ.