

ಅಪರಾಧ ಪ್ರಕರಣ ಪತ್ತೆ ಹಚ್ಚಿದ ಪೊಲೀಸರು
ಆಲೂರು: ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಚಿನ್ನಾಭರಣ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಇವುಗಳನ್ನುಪತ್ತೆ ಮಾಡಲು ಆಲೂರು ಠಾಣೆ ಪೊಲೀಸರು ರಚಿಸಿದ್ದ ತಂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ನ್ಯಾಯಾಲಯದ ಅನುಮತಿ ಪಡೆದ ನಂತರ ವಾರಸುದಾರರಿಗೆ ಚಿನ್ನಾಭರಣಗಳನ್ನು ಅಧಿಕೃತವಾಗಿ ಹಸ್ತಾಂತರ ಮಾಡಲಾಗುವುದು ಎಂದು ವೃತ್ತ ನಿರೀಕ್ಷಕ ಮೋಹನ ರೆಡ್ಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಟ್ಟಣದ ಕೊನೆಪೇಟೆಯ ನಿವಾಸಿ ಮಹಮ್ಮದ್ ಆಸೀಫ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನಿಂದ ಒಟ್ಟು 250 ಗ್ರಾಂ ಚಿನ್ನ ಹಾಗೂ 1ಕೆಜಿ ರೋಲ್ಡ್ ಗೋಲ್ಡ್ ಒಡವೆ ವಶಪಡಿಸಿಕೊಳ್ಳಲಾಗಿದೆ. ಕೆ. ಹೊಸಕೋಟೆ ಹೋಬಳಿ ರಿಜ್ವಾನ್ ಎಂಬಾತ ಜೂ.7ರಂದು ಕುಟುಂಬ ಸಮೇತ ಗದಗ ಜಿಲ್ಲೆ ಲಕ್ಷ್ಮೇಶ್ವರಕ್ಕೆ ತೆರಳಿದ್ದರು. ಅವರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಸಂದರ್ಭ ಹಿಂಬಾಗಿಲನ್ನು ಕಬ್ಬಿಣದ ರಾಡುಗಳಿಂದ ಒಡೆದು ಚಿನ್ನಾಭರಣ, ಹಾಗೂ 5,000 ನಗದು ಕಳವು ಮಾಡಿದ್ದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆ ಕಾರ್ಯ ನಡೆಸಿದಾಗ ಆರೋಪಿ ಬಂಧಿತನಾಗಿದ್ದಾನೆ. ಕಾನೂನು ಕ್ರಮ ಕೈಗೊಂಡು ಚಿನ್ನದ ಒಡವೆ ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಆಲೂರು ಠಾಣೆ ಸಿಬ್ಬಂದಿ ಅನಂತ್, ಕಾಂತರಾಜ್. ಪೂರ್ಣೇಂದ್ರ, ಹರೀಶ , ನಾಗೇಶ, ಅಶೋಕ್‌ಗೆ ಇದೇ ಸಂದರ್ಭ ವೃತ್ತ ನಿರೀಕ್ಷಕ ಮೋಹನ ರೆಡ್ಡಿ ಶ್ಲಾಘಿಸಿದರು. ಪರ ಊರಿಗೆ ತೆರಳುವ ಮುನ್ನ, ಮನೆ ಬೀಗ ಹಾಕಿದ ಸಂದರ್ಭ ಮತ್ತು ಅನುಮಾಸಾಸ್ಪದ ವ್ಯಕ್ತಿಗಳು ಕಂಡು ಬಂದ ವೇಳೆ ನಾಗರಿಕರು ಕೂಡಲೇ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.