ಪೊಲೀಸರ ಸರ್ಪಗಾವಲಲ್ಲಿ ತೂಬು ತೆರವು

26-klr-15
Published on

ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಎಸ್.ಆಗ್ರಹಾರ ಕೆರೆಗೆ ಹರಿಯುತ್ತಿರುವ ಕೆಸಿ ವ್ಯಾಲಿ ನೀರು ಜನ್ನಘಟ್ಟ ಕೆರೆಗೆ ಹರಿಯುವುದಕ್ಕೆ ಗುಂಪೊಂದು ವಿರೋಧಿಸಿದ ಹಿನ್ನೆಲೆಯಲ್ಲಿ ಪೊಲೀಸರ ರಕ್ಷಣೆಯಲ್ಲಿ ಭಾನುವಾರ ಕೆರೆಯ ತೂಬು ತೆರವುಗೊಳಿಸಿ ನೀರು ಹರಿಸಲಾಯಿತು.

ಎಸ್.ಅಗ್ರಹಾರ ಕೆರೆಯಿಂದ ಜನ್ನಘಟ್ಟ ಕೆರೆಗೆ ನೀರು ಹರಿಸುವುದಕ್ಕೆ ಎಸ್.ಆಗ್ರಹಾರ ಹಾಗೂ ಸುತ್ತಮುತ್ತಲ ಹಳ್ಳಿಯ ರೈತರು ಪ್ರತಿಭಟಿಸಿ ಜನ್ನಘಟ್ಟ ಕೆರೆಗೆ ನೀರು ಹರಿಯದಂತೆ ತಡೆಯಲು ಕೆರೆಯ ತೂಬನ್ನು ಬಂದ್ ಮಾಡಿದ್ದರು. ಈ ಬಗ್ಗೆ ಜನ್ನಘಟ್ಟ ಇನ್ನಿತರ ಹಳ್ಳಿ ಜನರು ಜಿಲ್ಲಾಡಳಿತಕ್ಕೆ ದೂರು ನೀರಿ ಜನ್ನಘಟ್ಟ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ, ಶ್ರೀನಿವಾಸಪುರ ಶಾಸಕ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಸ್.ಅಗ್ರಹಾರಕ್ಕೆ ಭೇಟಿ ನೀಡಿ ಜನ್ನಘಟ್ಟ ಕೆರೆಗೆ ನೀರು ಹರಿಸಲು ಮುಂದಾದಾಗ ಪ್ರತಿಭಟಿಸಿದ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆದಿತ್ತು. ಗ್ರಾಮಸ್ಥರು ಜಗ್ಗದಿದ್ದಾಗ ತಹಸೀಲ್ದಾರ್ ಗಮನಕ್ಕೆ ತಂದು ಪೊಲೀಸರ ನೆರವಿನಿಂದ ಕೆರೆ ತೂಬು ತೆರವುಗೊಳಿಸಿ ಜನ್ನಘಟ್ಟ ಕೆರೆಗೆ ಹರಿಸಲು ನಿರ್ಧರಿಸಲಾಯಿತು.

ಭಾನುವಾರ ಬೆಳಗ್ಗೆ ಕೋಲಾರ, ವೇಮಗಲ್ ಠಾಣೆ ಹಾಗೂ ಡಿಎಆರ್‌ನಿಂದ 80ಕ್ಕೂ ಹೆಚ್ಚು ಪೊಲೀಸರನ್ನು ಕರೆಸಿ ತೂಬು ತೆರೆಯಲು ಮುಂದಾದಾಗ ಗ್ರಾಮಸ್ಥರು ತೂಬು ತೆರೆಯಲು ಅವಕಾಶ ನೀಡಲಿಲ್ಲ.

ಎಸ್.ಆಗ್ರಹಾರ ಕೆರೆ ಶೇ.70 ಭರ್ತಿಯಾಗಿದೆ. ಈ ಕೆರೆ ನೀರು ಖಾಲಿ ಮಾಡುವುದಿಲ್ಲ, ಕೋಡಿ ಹರಿದ ಮೇಲೂ ನೀರು ಕೆರೆಗೆ ಬಂದೇ ಬರುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಕೃಷ್ಣಪ್ಪ ಮನವರಿಕೆ ಮಾಡಿದರಾದರೂ ಒಪ್ಪದಿದ್ದಾಗ, ಜಿಲ್ಲಾಧಿಕಾರಿಗಳ ಆದೇಶವಿದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಸಿದರು.

400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದವರಲ್ಲಿ ಕೆಲವರು ಎಚ್ಚರಿಕೆಗೆ ಮಣಿದು ನಿರ್ಗಮಿಸಿದರೆ ಅಡ್ಡಿಪಡಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಚದುರಿಸಿದರು. ಅನಂತರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತೂಬು ತೆರವುಗೊಳಿಸಿ ನೀರು ಬಿಟ್ಟರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಶೋಭಿತಾ, ಕೆಸಿ ವ್ಯಾಲಿ ನೀರು ಕದಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ ಕೇಸ್ ದಾಖಲಿಸಲಾಗುತ್ತದೆ. ಎಸ್.ಆಗ್ರಹಾರದ ಜನರಂತೆ ಜನ್ನಘಟ್ಟದಲ್ಲೂ ನೀರಿಗೆ ಜನ ಪರದಾಡುತ್ತಿದ್ದಾರೆ. ಅಂತರ್ಜಲ ಅಭಿವೃದ್ಧಿಗೆ ಜನ ಸಹಕಾರ ನೀಡಬೇಕು ಎಂದರು.

ಎಸ್.ಅಗ್ರಹಾರ ಕೆರೆಯಿಂದ ಕೆಸಿ ನೀರು ಕದಿಯಲು ಅಳವಡಿಸಿದ್ದ ಪೈಪ್, ಮೋಟರ್ ತೆರವುಗೊಳಿಸಿದರಲ್ಲದೆ, ಸಂಜೆಯವರೆಗೂ ಕೆರೆಗೆ ಕಾವಲಿದ್ದು ನಂತರ ನಿರ್ಗಮಿಸಿದರು.

ತೆರವಿಗೆ ಜಿಲ್ಲಾಧಿಕಾರಿ ನೀಡಿದ ಸೂಚನೆ ಪಾಲಿಸಲಾಗಿದೆ. ಕೆಸಿ ವ್ಯಾಲಿ ನೀರು ಎಸ್.ಅಗ್ರಹಾರ ಕೆರೆಗೆ ಮಾತ್ರ ಸೀಮಿತವಲ್ಲ. ಯೋಜನೆ ವ್ಯಾಪ್ತಿಯ ಇತರ ಕೆರೆಗಳಿಗೂ ಹರಿಸಬೇಕಿದೆ. ಈ ನೀರನ್ನು ಕೃಷಿಗೆ ಬಳಸದಂತೆ ಸರ್ಕಾರ ತಿಳಿಸಿದ್ದರೂ ಅಕ್ರಮವಾಗಿ ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಶೋಭಿತಾ, ತಹಸೀಲ್ದಾರ್, ಕೋಲಾರ ಕೆಸಿ ವ್ಯಾಲಿ ನೀರು ಯೋಜನೆಯ ಎಲ್ಲ ಕೆರೆಗಳಿಗೆ ಹರಿದು ಅಂತರ್ಜಲ ಅಭಿವೃದ್ಧಿಗೊಂಡಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜನ್ನಘಟ್ಟ ಕೆರೆ ನಿಗದಿತ ಅವದಿಯಲ್ಲಿ ತುಂಬದಿದ್ದರೆ ಮುಂದಿನ ಕೆರೆಗಳು ತುಂಬುವುದಿಲ್ಲ. ಆಗ ಆ ಭಾಗದ ರೈತರ ಕೋಪವನ್ನು ನಾವು ಎದುರಿಸಬೇಕಾಗುತ್ತದೆ. ಕೃಷ್ಣಪ್ಪ, ಎಇಇ, ಸಣ್ಣ ನೀರಾವರಿ ಇಲಾಖೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net