

ಮಂಗಳೂರು: ನಗರದ ಹಲವೆಡೆ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಅಸಹ್ಯ ವಸ್ತು ಹಾಗೂ ಧರ್ಮ ನಿಂದನೆಯ ಬರಹದ ಚೀಟಿಗಳನ್ನು ಹಾಕಿ ಅಪವಿತ್ರಗೊಳಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಪೂರಕ ಸಾಕ್ಷೃಗಳು ದೊರೆಯದ ಕಾರಣ ಬಿಟ್ಟು ಕಳುಹಿಸಿದ್ದಾರೆ.
ಪೊರ್ಕೋಡಿಯ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ಎಂಬುವರನ್ನು ಠಾಣೆಗೆ ಕರೆಯಿಸಿ 4 ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಅವರ ವಿರುದ್ಧ ಐಪಿಸಿ ಸೆಕ್ಷನ್ 169ರನ್ವಯ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ. ಇನ್ನೂ ಪೂರಕ ಸಾಕ್ಷೃಗಳು ದೊರೆತಿಲ್ಲ. ಸಾಕ್ಷೃಗಳು ದೊರೆತ ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅವರು ಈಗಲೂ ಸಂಶಯಾಸ್ಪದ ಆರೋಪಿಗಳೇ ಆಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ತಮ್ಮ ಸ್ನೇಹಿತನಾಗಿದ್ದ ನವಾಜ್ ಕೆಲವು ದೈವಸ್ಥಾನಗಳನ್ನು ಅಪವಿತ್ರಗೊಳಿಸಿದ ಕೃತ್ಯ ಎಸಗಿದ್ದು ಆತ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ. ನಾವು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ. ಆದರೆ ವಿಷಯ ಗೊತ್ತಿದ್ದ ಕಾರಣ ನಮಗೂ ಭಯವಾಗುತ್ತಿದ್ದು ಅದಕ್ಕಾಗಿ ಎಮ್ಮೆಕೆರೆ ಬಬ್ಬುಸ್ವಾಮಿ-ಕೊರಗಜ್ಜನ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಲು ಬಂದಿದ್ದೇವೆ ಎಂದು ಇಬ್ಬರು ಸಂಶಯಾಸ್ಪದ ಆರೋಪಿಗಳು ಹೇಳಿದ್ದರು. ಆದರೆ ಅವರು ಕೂಡ ನೇರವಾಗಿ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎಂಬುದಕ್ಕೆ ಪೂರಕ ಸಾಕ್ಷೃಗಳ ಅಗತ್ಯವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.