ಇತಿಹಾಸದ ಕಾಲಗಣನೆಯಲ್ಲಿ ನಿರ್ಲಕ್ಷ ಸಲ್ಲದು: ಗಣಪಯ್ಯ ಭಟ್

udp-3-award
Published on

ಉಡುಪಿ: ಇತಿಹಾಸ ಮತ್ತು ಸಂಶೋಧಕನ ಪ್ರಯತ್ನವನ್ನು ಸಮಾಜ ಗುರುತಿಸುತ್ತದೆ. ಈ ನಿಟ್ಟಿನಲ್ಲಿ ತುಳುನಾಡಿನ ಇತಿಹಾಸದ ಬಗ್ಗೆ ಶೀನಪ್ಪ ಹೆಗ್ಡೆಯವರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರು ಬರೆದ ಪುಸ್ತಕ ಯಾವ ಇಸವಿಯಲ್ಲಿ ಪ್ರಕಟವಾಗಿವೆ ಎಂಬ ಬಗ್ಗೆ ಬೇರೆ ಬೇರೆ ಉಲ್ಲೇಖಗಳನ್ನು ಮಾಡಲಾಗಿದೆ. ಇತಿಹಾಸದ ಕಾಲಗಣನೆ ಬಗ್ಗೆ ಈ ರೀತಿ ಗೊಂದಲ ಮೂಡಿಸುವುದು ಸಲ್ಲದು ಎಂದು ಪುರಾತತ್ವ ತಜ್ಞ, ಸಂಶೋಧಕ ಡಾ. ಪುಂಡಿಕಾ ಗಣಪಯ್ಯ ಭಟ್ ಹೇಳಿದರು.

ಶನಿವಾರ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಾಹೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಇತಿಹಾಸ ಕೃತಿ ಪರಿಚಯ ಮಾಡಿದ ವಿದ್ವಾನ್ ಡಾ. ಪಾದೇಕಲ್ಲು ವಿಷ್ಣು ಭಟ್, ಸ್ವಾತಂತ್ರೃ ಪೂರ್ವದ ದಕ್ಷಿಣ ಕನ್ನಡ ಜಿಲ್ಲೆಯೆಂದರೆ ಕಾಸರಗೋಡಿನಿಂದ ಶಿರೂರುವರೆಗೆ ವ್ಯಾಪಿಸಿತ್ತು. ಗಣಪತಿ ರಾವ್ ಐಗಳ್ ಅವರು ಮೊದಲ ಬಾರಿಗೆ ಇಲ್ಲಿನ ಇತಿಹಾಸವನ್ನು ಸಂಶೋಧನೆ ಮಾಡಿ ಕೃತಿ ರಚಿಸಿದ್ದಾರೆ. 100 ವರ್ಷ ಹಿಂದಿನ ಬಲ್ಲಾಳ್, ಗುತ್ತುಮನೆತನಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಪ್ರಸ್ತುತ ಇವರೆಲ್ಲರೂ ಭೂ ಸುಧಾರಣಾ ಕಾಯ್ದೆಯಲ್ಲಿ ಭೂಮಿ ಕಳೆದುಕೊಂಡಿದ್ದು, ಈ ಮನೆತನಗಳ ಸ್ಥಿತಿಗತಿ ಹೇಗಿದೆ ಎಂಬ ಬಗ್ಗೆ ಕ್ಷೇತ್ರ ಕಾರ್ಯದಲ್ಲಿ ಆಸಕ್ತಿ ಇರುವವರು ಅಧ್ಯಯನ ಕೈಗೊಳ್ಳಬಹುದು ಎಂದರು.

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ. ನೀತಾ ಇನಾಂದಾರ್ ಉಪಸ್ಥಿತರಿದ್ದರು. ತೆಂಕನಿಡಿಯೂರು ಕಾಲೇಜು ಪ್ರಾಂಶುಪಾಲ ಡಾ. ಸುರೇಶ್ ರೈ ಅಭಿನಂದನಾ ಭಾಷಣ ಮಾಡಿದರು. ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ ಅವರು ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಕುರಿತು ಮಾತನಾಡಿದರು. ಚೇಳ್ಯಾರುಗುತ್ತು ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸ್ವಾಗತಿಸಿ, ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಧಾತ್ರಿ ಪ್ರಭು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net