

ವಿಜಯವಾಣಿಸುದ್ದಿಜಾಲ ಉಡುಪಿ
ತುಳುನಾಡು ಹಾಗೂ ತುಳು ಭಾಷೆ ಸಾಂಸ್ಕೃತಿಕ ಶ್ರೀಮಂತಿಕೆಯ ಹಿನ್ನೆಲೆ ಹೊಂದಿದೆ. ತುಳು ಲಿಪಿಯೂ ಸಹ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಆಳ ಅಧ್ಯಯನದ ಅಗತ್ಯತೆ ಇದೆ. ಈಗಾಗಲೇ ಅನೇಕರು ಸಂಶೋಧನೆ ಮಾಡಿದ್ದು, ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಯುವಪೀಳಿಗೆ ಸಂಶೋಧನೆಯತ್ತ ಆಸಕ್ತರಾಗಬೇಕು ಎಂದು ತುಳುಭಾಷೆ ಹಾಗೂ ಸಂಸ್ಕೃತಿ ಚಿಂತಕ ಬೆನೆಟ್ ಜಿ. ಅಮ್ಮನ್ನ ಆಶಯ ವ್ಯಕ್ತಪಡಿಸಿದರು.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಧ್ವನ್ಯಾಲೋಕ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ತುಳುವಿನ ಆ ಸಂದರ್ಭದಲ್ಲಿ ಆದ ಯಾಂತ್ರಿಕ ಸುಧಾರಣೆಗಳನ್ನು ಬಾಷೆಲ್ ಮಿಷನ್ನ ಪತ್ರಾಗಾರದಲ್ಲಿ ಸಂಗ್ರಹಿಸಿಡಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ರೆವರೆಂಡ್ ಕಿಟ್ಟೆಲ್, ಮ್ಯಾನರ್ ಮತ್ತು ಮೋಂಗ್ಲಿನ್ ಇವರು ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಅಮೋಘ ಕೊಡುಗೆ ಕೊಟ್ಟಿದ್ದಾರೆ. ಅವರ ಸ್ಫೂರ್ತಿಯಿಂದಾಗಿಯೇ ಜರ್ಮನ್ ಮತ್ತು ಇಂಗ್ಲಂಡ್ನ ಅನೇಕ ವಿದ್ವಾಂಸರು ತುಳು ಭಾಷೆ, ಲಿಪಿಯ ಸುಧಾರಣೆಗಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಚೇಳ್ಯಾರುಗುತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.)ನ ಅಧ್ಯಕ್ಷೆ ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ನಿಟ್ಟೆ ವಿವಿಯ ಮಾನಸಿಕ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತಾ ಅಭಿನಂದನೆ ಮಾತುಗಳನ್ನಾಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ರೆಡ್ಕ್ರಾಸ್ನ ಗೌರವ ಕಾರ್ಯದರ್ಶಿ ಗಣಣಾಥ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.
ಉಡುಪಿಯ ಜಿ.ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಇತಿಹಾಸ ಸಹಪ್ರಾಧ್ಯಾಪಕ ಡಾ. ರಾಮದಾಸ್ ಪ್ರಭು, ತುಳುನಾಡಿನ ಪ್ರಭುತ್ವ ಹಾಗೂ ಧಾರ್ಮಿಕ ಪಂಥಗಳು ವಿಷಯ ಕುರಿತು ಉಪನ್ಯಾಸ ನೀಡಿದರು. ಪದ್ಮಾವತಿ ಭಟ್ ಪ್ರಾರ್ಥಿಸಿದರು. ಎಂಜಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.
ಸಂಶೋಧನೆ ಸುಲಭದ ಕಾರ್ಯವಲ್ಲ. ಹೀಗಾಗಿ ಸ್ವಅಧ್ಯಯನ, ಸಂಶೋಧನಾ ನಿರತರಿಗೆ ಈ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದ ಎಲ್ಲ ಪ್ರಶಸ್ತಿಗಳನ್ನೂ ಸೃಜನಶೀಲ ಸಾಹಿತಿಗಳಿಗೆ ಕೊಡಲಾಗುತ್ತಿದೆ. ಆದರೆ, ಕಷ್ಟದಾಯಕವಾದ ಸಂಶೋಧನಾ ಕಾರ್ಯ ಮಾಡುತ್ತಿರುವವರನ್ನು ಗುರುತಿಸಿ, ಗೌರವಿಸಬೇಕು ಎನ್ನುವುದು ನಮ್ಮ ಉದ್ದೇಶ. ಡಾ. ಇಂದಿರಾ ಹೆಗ್ಡೆ.ಅಧ್ಯಕ್ಷೆ. ಚೇಳ್ಯಾರುಗುತ್ತು ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.)