ಪೊಳಲಿ ಜಾತ್ರೆ ರಥೋತ್ಸವ ಸಂಭ್ರಮ

New Project (11)
Published on

ಗುರುಪುರ: ಒಂದು ತಿಂಗಳ ಪೊಳಲಿ ಜಾತ್ರೆಯ 5 ದಿನಕ್ಕೊಂದು ಬಾರಿ ದಂಡಮಾಲೆ ನಡೆದರೆ, ಕೊನೆಯಲ್ಲಿ 5 ದಿನಗಳ ಚೆಂಡು ನಡೆಯಿತು. ಗುರುವಾರ ಚೆಂಡೆ, ಓಲಗ ಹಾಗೂ ಸಾಂಪ್ರದಾಯಿಕ ದೀವಟಿಕೆ ಮತ್ತು ಪತಾಕೆ ಹಿಡಿದವರು ಮುಂದೆ ಸಾಗುತ್ತಲೇ ಸಾವಿರಾರು ಭಕ್ತರು ರಥ ಎಳೆದರು. ಪ್ರತಿದಿನವೂ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದು ರಥೋತ್ಸವದಂದು ಭಕ್ತ ಸಾಗರವೇ ಪೊಳಲಿಯತ್ತ ಹರಿದು ಬಂದಿದೆ.

ಕಲ್ಲಂಗಡಿಗೆ ಭಾರಿ ಬೇಡಿಕೆ: ಚೆಂಡು ನಡೆದ 5 ದಿನಗಳಲ್ಲಿ ಪೊಳಲಿಯಲ್ಲಿ ಬೆಳೆದ ಕಲ್ಲಂಗಡಿಗೆ ಭಾರಿ ಬೇಡಿಕೆ ಇತ್ತು. ಒಂದು ಸಣ್ಣ ಕಲ್ಲಂಗಡಿಗೆ 100-150 ರೂ. ಆಗಿದ್ದರೆ, ದೊಡ್ಡದಕ್ಕೆ 200ರಿಂದ 300 ರೂ. ಆಗಿತ್ತು. ಕಲ್ಲಂಗಡಿ ವ್ಯಾಪಾರ ಉತ್ತಮವಾಗಿತ್ತು ಎಂದು ವ್ಯಾಪಾರಿಗಳು ಹೇಳುತ್ತಿದ್ದರು. ಹಿಂದಿನ ಕಾಲದಲ್ಲಿ ಪೊಳಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಪ್ರಸಾದ ರೂಪವಾಗಿ ಕಲ್ಲಂಗಡಿ ಖರೀದಿ ಮನೆಗೆ ಕೊಂಡೊಯ್ಯುತ್ತಿದ್ದರು.

ಭರ್ಜರಿ ಖರೀದಿ: ದೇವಸ್ಥಾನಕ್ಕೆ ಹತ್ತಿರದ ಬಹುತೇಕ ಎಲ್ಲ ಗದ್ದೆಗಲ್ಲಿ ಅಂಗಡಿ ಮಳಿಗೆಗಳು ತುಂಬಿದ್ದು, ಎಲ್ಲೆಡೆ ಭರ್ಜರಿ ವ್ಯಾಪಾರ ಕಂಡು ಬಂತು. ಆಟಿಕೆ, ಪಾತ್ರೆ-ಪರಡಿ, ಪ್ಲಾಸ್ಟಿಕ್ ಸೊತ್ತು, ಮಾಲೆ-ಸರಕು, ತಂಪುಪಾನೀಯ ಮಾರಾಟದ ಅಂಗಡಿಗಳ ಮುಂದೆ ಗ್ರಾಹಕರು ಮುಗಿ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿತ್ತು.

ಪಟಾಕಿ ಸಿಡಿಸಲು ಸಿದ್ಧತೆ: ಪೊಳಲಿ ರಥೋತ್ಸವದಂದು ಸುಡುಮದ್ದು ಸಿಡಿಸುವುದು ವಿಶೇಷ. ದೇವಸ್ಥಾನದ ಒಂದು ಸುತ್ತ ರಥ ಎಳೆದ ಬಳಿಕ ನೇರವಾಗಿ ಚೆಂಡಿನ ಗದ್ದೆಗೆ ರಥ ತರಲಾಗುತ್ತದೆ. ಅಲ್ಲಿ ಪೂಜೆ ನಡೆದ ಬಳಿಕ ಪಟಾಕಿ ಸಿಡಿಲಾಗುತ್ತದೆ. ವಿಶಾಲ ಚೆಂಡಿನ ಗದ್ದೆಯಲ್ಲಿ ‘ಬೆಡಿ’ ಕಂಬ ಅಳವಡಿಸಿ ಆ ಮೂಲಕ ಬಾನೆತ್ತರಕ್ಕೆ ಹಾರುವ ಬಣ್ಣಬಣ್ಣದ ಪಟಾಕಿ ಸಿಡಿಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net