ಹೊಸ ಸೇತುವೆಗೆ ಬಜೆಟ್‌ನಲ್ಲಿ ಅನುದಾನ : ಸಚಿವ ಸತೀಶ್ ಜಾರಕಿಹೊಳಿ ಭರವಸೆ

New Project (7)
Published on

ಗುರುಪುರ: ಪೊಳಲಿ-ಅಡ್ಡೂರು ಹೊಸ ಸೇತುವೆ ನಿರ್ಮಾಣ ಕಾರ್ಯಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನಕ್ಕೆ ಚರ್ಚಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಮಂಗಳವಾರ ಪೊಳಲಿಗೆ ಭೇಟಿ ನೀಡಿ ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ವೀಕ್ಷಿಸಿ, ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸ್ಥಳೀಯರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಪ್ರಸಕ್ತ ನಡೆಯುತ್ತಿರುವ ಕಾಮಗಾರಿ ಅತಿ ಶೀಘ್ರ ಪೂರ್ಣಗೊಳಿಸುವಂತೆ ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಬಿ.ವಿ. ಜಗದೀಶ್‌ಗೆ ಸೂಚಿಸಿದರು.

ಕರಿಯಂಗಳ ಗ್ರಾ.ಪಂ. ಸದಸ್ಯ ಚಂದ್ರಹಾಸ ಪಲ್ಲಿಪಾಡಿ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗ ಸಚಿವರಿಗೆ ಮನವಿ ನೀಡಿ, ಪೊಳಲಿ ಜಾತ್ರೆಗೆ ಮುಂಚಿತವಾಗಿ ಸೇತುವೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನೈಾಕ್, ಪಂಚಾಯಿತಿ ಸದಸ್ಯರು, ಪಿಡಬ್ಲ್ಯುಡಿ ಹಿರಿಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

10 ದಿನ ವಾಹನ ಸಂಚಾರ ಬಂದ್

ಸೇತುವೆಗೆ ಬೀಯರಿಂಗ್ ಅಳವಡಿಕೆ ಕಾರ್ಯ ನಡೆಯಲಿದ್ದು, ಹೀಗಾಗಿ ಗುರುವಾರದಿಂದ ಮುಂದಿನ 10 ದಿನಗಳವರೆಗೆ ಹಳೇ ಸೇತುವೆಯಲ್ಲಿ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಪಿಡಬ್ಲ್ಯುಡಿ ಅಧಿಕಾರಿ ಜಗದೀಶ್ ತಿಳಿಸಿದರು.

ಕಮಾನ್ ಕಟ್!

ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಸೇತುವೆಯ ಎರಡೂ ಕಡೆ ಉಕ್ಕಿನ ಕಮಾನು ಅಳವಡಿಸಲಾಗಿತ್ತು. ಆದರೆ ಈಗ ಅದನ್ನು ತುಂಡು ಮಾಡಲಾಗಿದೆ. ಜಿಲ್ಲಾಡಳಿತದ ಈ ಕ್ರಮ ಸ್ಥಳೀಯರಲ್ಲಿ ಹಲವು ಸಂದೇಹಗಳಿಗೆ ಕಾರಣವಾಗಿದೆ. ಅಲ್ಲದೇ ಲಾರಿಗಳು ರಾಜಾರೋಷವಾಗಿ ಸೇತುವೆಯಲ್ಲಿ ಓಡಾಡುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪೊಳಲಿ-ಅಡ್ಡೂರಿನ ಹಳೇ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸೇತುವೆಗೆ ಬೀಯರಿಂಗ್ ಅಳವಡಿಸುವ ವೇಳೆ 10 ದಿನ ಎಲ್ಲ ವಾಹನ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಸಹಕರಿಸಬೇಕು. ಪೊಳಲಿಯಲ್ಲಿ ಹೊಸ ಸೇತುವೆ ನಿರ್ಮಾಣದ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸೇತುವೆಗೆ 50 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಹೊಸ ಸೇತುವೆಗೆ ಶೀಘ್ರ ಮಂಜೂರಾತಿ ಸಿಗುವ ಭರವಸೆ ಇದೆ. ರಾಜೇಶ್ ನೈಾಕ್, ಬಂಟ್ವಾಳ ಶಾಸಕ https://www.vijayavani.net/addiction-free-living-program https://www.vijayavani.net/the-government-school-building-has-fallen-into-disrepair

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net