

ಚಿಂತಾಮಣಿ: ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಪೀಡೆನಾಶಕಗಳ ಬಳಕೆ ಹೆಚ್ಚಾಗಿದ್ದು, ಪ್ರಕೃತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಸೇವಿಸುವ ಆಹಾರ, ಉಸಿರಾಡುವ ಗಾಳಿ ವಿಷಕಾರಿಯಾಗುತ್ತದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಎನ್.ಮಂಜುಳಾ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಕೋಟಗಲ್ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೃಷಿ ಇಲಾಖೆ ಆಶ್ರಯದಲ್ಲಿ 2024-25ನೇ ಸಾಲಿನ ಸಸ್ಯ ಸಂರಕ್ಷಣಾ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಸಸ್ಯ ಸಂರಕ್ಷಣಾ ಔಷಧಗಳ ಶಿಫಾರಸು ಮತ್ತು ಸುರಕ್ಷಿತ ಬಳಕೆ ತರಬೇತಿ ಆಂದೋಲನದಲ್ಲಿ ಮಾತನಾಡಿದರು.
ಸಮಗ್ರ ಕೃಷಿಯಿಂದ ರೈತರ ಆದಾಯ ದ್ವಿಗುಣವಾಗಲಿದ್ದು, ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಪೂರ್ವಜರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೊಟ್ಟಿಗೆ ಗೊಬ್ಬರದಿಂದ ಬೇಸಾಯ ಮಾಡುತ್ತಿದ್ದರಿಂದ ಗುಣಮಟ್ಟದ ಆಹಾರ ಸಿಗುತ್ತಿತ್ತು. ರೈತರು ವಿಜ್ಞಾನಿಗಳ ಸಲಹೆ, ಅಧಿಕಾರಿಗಳ ಮಾರ್ಗದರ್ಶನ, ಶಿಫಾರಸಿನಂತೆ ಕೀಟನಾಶಕಗಳನ್ನು ಬಳಸಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ ಮಾತನಾಡಿ, ಸೂಕ್ತ ಶಿಾರಸ್ಸಿಲ್ಲದ ಅವೈಜ್ಞಾನಿಕ ಕೀಟನಾಶಕ, ಸಸ್ಯನಾಶಕಗಳನ್ನು ಬಳಸುವುದರಿಂದ ಜೀವಸಂಕುಲದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸರಿಯಾದ ರೋಗ ಮತ್ತು ಕೀಟಗಳನ್ನು ಗುರುತಿಸಿ, ಸಸ್ಯ ಸಂರಕ್ಷಣಾ ಔಷಧ ಸಿಂಪಡಿಸುವುದು ಅಗತ್ಯವಾಗಿದೆ. ಇದು ಪರಿಸರ, ಜೀವಸಂಕುಲ ಮತ್ತು ಮಾನವನ ಆರೋಗ್ಯಕ್ಕೆ ಸುರಕ್ಷಿತವಾಗಿರುತ್ತದೆ ಎಂದರು.
ಸುರಕ್ಷಿತ ಪೀಡನಾಶಕಗಳ ಬಳಕೆಯ ಅರಿವು ಮುಡಿಸುತ್ತಾ, ಸಾವಯವ ಕೃಷಿ ಪದ್ಧತಿ, ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು, ರಾಸಾಯನಿಕ ಗೊಬ್ಬರ, ಕೀಟನಾಶಕ, ಪೀಡೆನಾಶಕಗಳನ್ನು ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಬೇಕೆಂದು ತಿಳಿಸಿದರು.
ವಿಜ್ಞಾನಿ ಡಾ.ಪಾಪಿರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮುಸುಕಿನ ಜೋಳ ಹಾಗೂ ನೆಲಗಡಲೆ, ತೊಗರಿ ಬೆಳೆಗಳಲ್ಲಿ ಹೆಚ್ಚಾಗಿ ರೋಗ ಹಾಗೂ ಕೀಟಬಾಧೆ ಕಂಡುಬರುತ್ತಿದ್ದು, ಅವುಗಳ ನಿಯಂತ್ರಣ ಕ್ರಮಗಳ ಬಗ್ಗೆ ಅರಿಯಬೇಕು. ಬೆಳೆಗಳಲ್ಲಿ ಗೊಣ್ಣೆಹುಳುವಿನ ಭಾದೆ ಹೆಚ್ಚಾಗಿರುವುದರಿಂದ ಹತೋಟಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಕೀಟನಾಶಕಗಳ ಸುರಕ್ಷಿತ ಬಳಕೆಯ ಹಂತಗಳು ಹಾಗೂ ಸಿಂಪರಣೆಯ ನಂತರದ ಹಂತದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರೈತ ಉತ್ಪಾದಕರ ಸಂಸ್ಥೆಯ ಜಿಲ್ಲಾ ಸಂಯೋಜಕ ಶ್ರೀರಾಮರೆಡ್ಡಿ ಸಾವಯವ ಕೃಷಿ ತರಬೇತಿ ನೀಡಿದರು. ವಿವಿಧ ಗ್ರಾಮದ ಸದಸ್ಯರು, ಕೃಷಿ ಅಧಿಕಾರಿ ಪ್ರವೀಣ್ ಕುಮಾರ್, ಕೃಷಿ ಇಲಾಖೆ ಸಿಬ್ಬಂದಿ ಮತ್ತಿತರರು ಇದ್ದರು.