

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಂದು ಸೃಜನಶೀಲ ಸಾಹಿತ್ಯಕ್ಕೂ ಕಾವ್ಯವೇ ಮೂಲ. ಬಹುತೇಕ ಸಾಹಿತಿಗಳು ಬರವಣಿಗೆ ಆರಂಭಿಸುವುದೇ ಕಾವ್ಯದಿಂದ. ತೋಚಿದ್ದನ್ನು, ಅನಿಸಿದ್ದು, ಆ ಕ್ಷಣಕ್ಕೆ ಗೀಚಬಹುದಾದ ಪ್ರಮುಖ ವೇದಿಕೆ ಕಾವ್ಯ. ಹೀಗಾಗಿಯೇ ಕಾವ್ಯ ನಮ್ಮಲ್ಲಿ ಜನಪ್ರಿಯ ಸಾಹಿತ್ಯ ಪ್ರಕಾರವಾಗಿ ಉಳಿದಿದೆ ಎಂದು ಹಿರಿಯ ಸಾಹಿತಿ ಪ್ರೊ. ಅಶೋಕ ಶೆಟ್ಟರ್ ಹೇಳಿದರು.
ನಗರದ ರಂಗಾಯಣದಲ್ಲಿ ಕ್ರಾಂತಿ ಪ್ರಕಾಶನ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಕ್ರಾಂತಿ ಸಾಹಿತ್ಯ ಕಾರ್ಯಕ್ರಮದಲ್ಲಿ ಅನಿಲ ಹುಲಮನಿ ಅವರ ಹೊಸ ಅಧ್ಯಾಯ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಕವಿಯಾದವನಿಗೆ ಯಾವುದೇ ಚೌಕಟ್ಟಿಲ್ಲ. ಆ ಸಮಯದಲ್ಲಿ ಏನು ಬರೆಯಬೇಕು ಅನಿಸುತ್ತದೆಯೋ ಅದನ್ನು ಬರೆಯುತ್ತಾರೆ. ಇಂದಿನ ಪೀಳಿಗೆ ವಿಭಿನ್ನ ಕಾವ್ಯ ಪ್ರಕಾರದಲ್ಲಿ ತೊಡಗುತ್ತಿದ್ದು, ಸಾಹಿತ್ಯ ಬೆಳೆಯುತ್ತಿದೆ. ಆದರೆ ಕವಿಯಾದವನು ಯಾವತ್ತಿಗೂ ಅವಸರದ ಸಾಹಿತ್ಯಕ್ಕೆ ಒಳಗಾಗಬಾರದು. ತಾನು ಬರೆದಿದ್ದನ್ನು ಮತ್ತೊಬ್ಬರಿಗೆ ತೋರಿಸಿ, ಅದರಲ್ಲಿ ಬದಲಾವಣೆಗಳನ್ನು ಮಾಡಿ, ಕಾದು ಕಾದು ತಾಳ್ಮೆಯಿಂದ ಪರಿಶೀಲಿಸಿದ ಬಳಿಕ ಪ್ರಕಟಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸಿದ್ದನಗೌಡ ಪಾಟೀಲ ಮಾತನಾಡಿ, ಸಾಹಿತ್ಯವೇ ಒಂದು ಚಳವಳಿ ಇದ್ದಂತೆ. ವ್ಯಕ್ತಿಯಾದವನು ತನ್ನೊಳಗಿನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಪ್ರಬಲ ಮಾಧ್ಯಮ ಸಾಹಿತ್ಯ. ಸದ್ಯ ಇಂತಹ ಸಾಹಿತ್ಯಕ್ಕೆ ಮತ್ತು ಸಾಹಿತ್ಯ ಕಾರ್ಯಕ್ರಮಗಳತ್ತ ಯುವ ಪೀಳಿಗೆ ಹೆಚ್ಚು ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಡಾ. ದುಂಡಪ್ಪ ನಾಂದ್ರೆ ಮಾತನಾಡಿದರು. ಕ್ರಾಂತಿ ಪ್ರಕಾಶನದ ಜಾಫರ್ ನದಾಫ್, ಸಮಾಜ ಸೇವಕ ಬಸವರಾಜ ಬೂದಿಹಾಳ, ಬಸವರಾಜ ಆನೆಗುಂದಿ, ಇತರರು ಇದ್ದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚನ ಮಾಡಿದರು. ಬೆಳಗಾವಿಯ ಸಾಹಿತಿ ಸಿದ್ರಾಮ ಪಾಟೀಲ ಕವಿಗೋಷ್ಠಿ ಉದ್ಘಾಟಿಸಿರು. ಹಿರಿಯ ಕವಿ ಪ್ರಕಾಶ ಕಡಮೆ ಅಧ್ಯಕ್ಷತೆ ವಹಿಸಿದ್ದರು. ಡಾ. ಶಶಿಧರ ನರೇಂದ್ರ ಆಶಯ ನುಡಿ ಹೇಳಿದರು. ಹಿರಿಯ ಸಾಹಿತಿ ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ರಂಗ ನಿರ್ದೇಶಕ ಮಹಾದೇವ ಹಡಪದ ಉಪಸ್ಥಿತರಿದ್ದರು.
ಸೋಮು ರೆಡ್ಡಿ ಸ್ವಾಗತಿಸಿದರು. ಡಾ. ರಾಜೇಂದ್ರಕುಮಾರ ಮಠ ನಿರೂಪಿಸಿದರು. ರಾಜಕುಮಾರ ಮಡಿವಾಳರ ವಂದಿಸಿದರು.