

ಶ್ರೀರಂಗಪಟ್ಟಣ: ಬದುಕಿನ ಮಹತ್ವ ಮತ್ತು ಜಗತ್ತಿನ ನಿಗೂಢತೆಯ ಅರಿವನ್ನು ಎಲ್ಲರಿಗೂ ಪರಿಚಯಿಸುವುದು ಕಾವ್ಯವಾಗಿದ್ದು, ಸಾಹಿತ್ಯದ ಅಸ್ತಿತ್ವ ಹಾಗೂ ಮೂಲಗುಣ ಕಾವ್ಯದಲ್ಲಿ ಅಡಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ತಿಳಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದ ಶ್ರೀರಂಗ ದಸರಾ ವೇದಿಕೆಯಲ್ಲಿ ದಸರಾ ಪ್ರಯಕ್ತ ಶನಿವಾರ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಎನ್ನುವುದು ಸೃಜನಶೀಲತೆ, ದೇಸಿ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಶಕ್ತಿ. ಸಾಮಾನ್ಯವಾದ ಸರಳ ಚಿತ್ರ, ವಿಶೇಷ ಘಟನೆಗಳನ್ನು ಮಾತೃಭಾಷೆಯ ವಿಶೇಷ ಶಕ್ತಿಯಲ್ಲಿ ಹೊರಹಾಕಿದಾಗ ಮಾತ್ರ ಕವಿಯ ಕಾವ್ಯ ರಚನೆ ಅಮೋಘವಾಗಿರುತ್ತದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಮಂಡ್ಯ ಮಾತನಾಡಿ, ಈ ನೆಲದ ಕವಿಗಳು ಬೆಳೆಯಬೇಕು. ಕವಿಗಳು ಎಂದಿಗೂ ಹಿಂದೆ ಉಳಿಯಬಾರದು. ಹಾಗಾಗಿ ಕವಿಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಹೇಳಿದರು.
ಎಷ್ಟೋ ಕವಿಗಳು ಇಂದಿಗೂ ತಮ್ಮಲ್ಲಿರುವ ಕಲೆಯನ್ನು ಮುಚ್ಚಿಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಒಳ್ಳೆಯ ವೇದಿಕೆ ಸಿಗದಿರುವುದು. ಆದ್ದರಿಂದ ಕವಿಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಕವಿಗಳು ಬೆಳೆದು ಮುಂದೆ ಬಂದರೆ ಪ್ರಪಂಚ ತಾನಾಗಿಯೇ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗುತ್ತದೆ. ಸಮಾಜವನ್ನು ಉತ್ತಮ ದಿಕ್ಕಿಗೆ ತೆಗೆದುಕೊಂಡು ಹೋಗುವಲ್ಲಿ ಕವಿಗಳೂ ಸಹ ಪ್ರಮುಖರು ಎಂದರು.
ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ದಸರಾ ಪ್ರಧಾನ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು. ಪ್ರಧಾನ ಕವಿಗೋಷ್ಠಿಯಲ್ಲಿ ಅರಕೆರೆ ಮಂಜುಳಾ, ಕೆ.ಎನ್.ಪುರುಷೋತ್ತಮ್, ವಿ.ಎ.ಅಶ್ವಿನಿ, ಸಾ.ವೇ.ರ ಸ್ವಾಮಿ, ದೋ.ಚಿ.ಗೌಡ, ಕೆ.ಎಲ್.ಶುಭಾಮಾಣಿ ನಾ.ರೈತ ನಾಗತಿಹಳ್ಳಿ, ಎಚ್.ಆರ್.ತ್ರಿವೇಣಿ, ರಂಗನಾಥ, ಶ್ವೇತಾ, ಕಾಳೇಹಳ್ಳಿ ಪುಟ್ಟೇಗೌಡ, ಕೆ.ಪಿ. ಮೃತ್ಯುಂಜಯ, ಎಂ.ಕೆ. ಸಿಂಚನಾ, ಸಿ.ಬಿ.ಉಮಾಶಂಕರ್, ದರಸಗುಪ್ಪೆ ಚೈತ್ರಾ, ಕೆ.ಬಿ.ಜಯರಾಮು ಸೇರಿದಂತೆ ಹಲವರು ಕವಿತೆ ವಾಚಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ತಾಲೂಕು ಅಧ್ಯಕ್ಷ ಎಂ.ಬಿ.ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಮಹೇಶ್, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರ್, ಪ್ರಧಾನ ಕಾರ್ಯದರ್ಶಿ ವಿ.ಹರ್ಷ ಪಣ್ಣೆದೊಡ್ಡಿ, ಶ್ರೀರಂಗನಾಯಕಿ ಸ್ತ್ರೀ ಸಮಾಜ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಪುರಸಭಾ ಸದಸ್ಯರಾದ ಎಂ.ಎಲ್.ದಿನೇಶ್, ಎಸ್.ಎನ್.ದಯಾನಂದ, ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.
ಯುವ ಕವಿಗೋಷ್ಠಿ: ಯುವ ಕವಿಗೋಷ್ಠಿಯನ್ನು ಸಾಹಿತಿ ಸತೀಶ್ ಜವರೇಗೌಡ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮದ್ದೂರು ಅನನ್ಯಾ, ನಾಗಮಂಗಲ ಮಹದೇವಸ್ವಾಮಿ, ಕೋಡಾಲ ಅಪೇಕ್ಷ, ಚೋಕನಹಳ್ಳಿ ಜಯರಾಮು, ಶ್ರೀನಿವಾಸ ಅಗ್ರಹಾರದ ಪೂಜಾ, ಕೆ.ಆರ್ ಪೇಟೆ ಸಹನಾ, ಬೆಟ್ಟಹಳ್ಳಿ ಜೆ. ರಮೇಶ್, ನಾಗಮಂಗಲ ದೇವಾನಂದ, ಆದಿತ್ಯ ಭಾರದ್ವಾಜ್, ಸಾಲುಮರದ ನಾಗರಾಜು, ಪರಿಸರ ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.