

ವಿಜಯವಾಣಿ ಸುದ್ದಿಜಾಲ ಧಾರವಾಡ
ಕವಿಯು ತನ್ನ ಕಲ್ಪನಾ ವಿಹಾರದಲ್ಲಿ ಕಂಡ ಅಗಮ್ಯವಾದ ಚಿತ್ರಣಗಳನ್ನು ಕಾವ್ಯಾತ್ಮಕಗೊಳಿಸುತ್ತಾನೆ. ಕಾವ್ಯವು ಕವಿಯ ಪ್ರತಿಭಾ ಸೃಷ್ಟಿಯಾಗಿದ್ದು, ಅದು ವಿಶಿಷ್ಟ ಹೃದ್ಯ ಸೃಷ್ಟಿಯ ಸಂಗಮವೂ ಆಗಿದೆ ಎಂದು ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪ ಹಾಗೂ ಶಿರೂರಿನ ಎನ್. ಜಿ. ಬಾಳನಗೌಡ್ರ ಸರ್ಕಾರಿ ಪ್ರೌಢ ಶಾಲೆಯ ಆಶ್ರಯದಲ್ಲಿ ಶಿರೂರ ಗ್ರಾಮದ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಲಕ್ಷ್ಮೀಬಾಯಿ ಪಾಟೀಲ ಅವರ ಪ್ರೀತಿಯ ಹಣತೆ ಕವನ ಸಂಕಲನ ಬಿಡುಗಡೆ ಮತ್ತು ತಾಯಂದಿರ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾವ್ಯ ಒಂದು ಸ್ವತಂತ್ರ ಜಗತ್ತು. ಕವಿಯು ತನ್ನ ಅಂತರಂಗ ಮತ್ತು ಬಹಿರಂಗದ ಬದುಕಿನ ಅವಲೋಕನದಲ್ಲಿ ಕಂಡ ವಿಭಿನ್ನ ಅನುಭವಗಳನ್ನು ಕಾವ್ಯದ ಚೌಕಟ್ಟಿನಲ್ಲಿ ಪೋಣಿಸಿ ಅಭಿವ್ಯಕ್ತಿಸುತ್ತಾನೆ. ಯಾವುದೇ ಕಾವ್ಯವಿದ್ದರೂ ಅದು ಕವಿಯ ಮತ್ತು ಓದುಗರ ಮಧ್ಯೆ ಹೃದಯ ಸಂವಾದ ಹುಟ್ಟು ಹಾಕುತ್ತದೆ ಎಂದರು.
ಸಾಹಿತಿ ಪ್ರೊ. ಧನವಂತ ಹಾಜವಗೋಳ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಆಳವಾದ ಅಧ್ಯಯನದಲ್ಲಿ ತೊಡಗಬೇಕು. ತಮ್ಮ ಅನುಭವದೊಂದಿಗೆ ಅಧ್ಯಯನದ ಸಂಗತಿಗಳನ್ನು ಸಮೀಕರಿಸಬೇಕು. ವ್ಯಾಪಕ ಭಾಷಾಪ್ರಭುತ್ವ ಪಡೆದಾಗಲೇ ಮಾತ್ರ ಕಾವ್ಯ ರಚನೆ ವಿಶಿಷ್ಟವಾಗಿ ಓದುಗರ ಗಮನಸೆಳೆಯುತ್ತದೆ ಎಂದರು.
ಕವನ ಸಂಕಲನ ಬಿಡುಗಡೆ ಮಾಡಿದ ಶಿರೂರ ಗ್ರಾಮದ ರೈತ ಶಂಕರಗೌಡ ಬಾಳನಗೌಡ್ರ ಮಾತನಾಡಿದರು. ದೇವಕ್ಕ ಪಾಟೀಲ, ಡಾ. ಭಾಗ್ಯಜ್ಯೋತಿ ಕೋಟಿಮಠ, ಲೇಖಕ ಸಿದ್ಧಲಿಂಗಯ್ಯ ಕುಲಕರ್ಣಿ, ಶಿರೂರ ಗ್ರಾಪಂ ಅಧ್ಯಕ್ಷೆ ಉಮಾಶ್ರೀ ಕಾಳಿ, ಉಪಾಧ್ಯಕ್ಷ ಸಂಗನಗೌಡ ತೋಟದ, ಮಾಜಿ ಅಧ್ಯಕ್ಷ ಬನಪ್ಪಗೌಡ ಗೌಡ್ರ, ಮಂಜುನಾಥ ಹುಲಮನಿ, ಮಹಾಂತೇಶ ಬೆನಕಣ್ಣವರ, ಶಂಕರೆಪ್ಪ ಯಮನೂರ, ಎಂ.ಎಂ. ಗಾಣಿಗೇರ, ಯಲ್ಲಪ್ಪ ಗೋಕಾವಿ, ಉಮೇಶ ದೇಸಾಯಿ, ನಿಂಗನಗೌಡ ಪಾಟೀಲ, ಮಲ್ಲನಗೌಡ ಗೌಡರ, ಎನ್.ಎ. ಹೊಂಗಲ, ಲಲಿತಾಕ್ಷಿ ಯಮನಾಳ, ಶ್ರೀದೇವಿ ಕಾಳಚರಂತಿಮಠ, ಸುಮಂಗಲಾ ಪಾರ್ವತಿ, ಇತರರು ಇದ್ದರು.
ಎಸ್.ವೈ. ಗೌಡರ ಸ್ವಾಗತಿಸಿದರು. ಪ್ರೀತಿ ನಾಯ್ಕ ನಿರೂಪಿಸಿದರು. ಪ್ರಭುಲಿಂಗ ನರೇಗಲ್ಲ ವಂದಿಸಿದರು.