

ಮೈಸೂರು: ಕಾವ್ಯ ಅಂತರಂಗದ ತರಂಗ, ಹೃದಯ ಗೀತೆಯೂ ಹೌದು. ಕವಿತೆ ರಚಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಿಮಾಲಯ ಪ್ರತಿಷ್ಠಾನ, ರೋಟರಿ ಮೈಸೂರು ಸ್ಟಾರ್ಸ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕವಯತ್ರಿ ನಾಗಮ್ಮ ಅವರ ‘ಅಂತರಂಗ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಾಚೀನ ಕವಿಗಳು ಕಾವ್ಯವನ್ನು ಭುವನ, ಭವನದ ಭಾಗ್ಯ ಎಂದು ಬಣ್ಣಿಸಿದ್ದಾರೆ. ದ.ರಾ. ಬೇಂದ್ರೆ ಅವರು ಕಾವ್ಯವನ್ನು ಮೃದಂಗಕ್ಕೆ ಹೋಲಿಸಿದ್ದಾರೆ. ಇದು ಅಂತರಂಗದ ತರಂಗ, ಹೃದಯ ಗೀತೆಯೂ ಹೌದು. ಹಾಗಾಗಿ ಕವಿತೆ ರಚಿಸುವಾಗ ಎಚ್ಚರಿಕೆವಹಿಸಬೇಕು. ಪ್ರಾಸಕ್ಕೆ ದಾಸರಾಗಿ ಪದ್ಯದ ಭಾವಕ್ಕೆ ಧಕ್ಕೆ ತರಬಾರದು ಎಂದು ಸಲಹೆ ನೀಡಿದರು.
ನಾಗಮ್ಮ ಅವರು ರಚಿಸಿರುವ ಕವನ ಸಂಕಲದಲ್ಲಿ ಒಟ್ಟು 60 ಕವನಗಳಿದ್ದು, ಇವು ಪ್ರಾಸ ಪ್ರಧಾನ ಪದ್ಯಗಳಾಗಿವೆ. ಅದರಲ್ಲಿಯೂ ಆದಿ ಪ್ರಾಸ ಹೆಚ್ಚಾಗಿದೆ. ಕಾವ್ಯಕ್ಕೆ ಅದು ಮುಖ್ಯ. ಪ್ರಾಸ ಬಳಕೆಯೂ ತ್ರಾಸವಾದರೆ ಅತಿರೇಕವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರಿಕೆವಹಸಬೇಕು ಎಂದು ಹೇಳಿದರು.
ಇತ್ತೀಚೆಗೆ ಗದ್ಯ, ಸುದ್ದಿಯಲ್ಲೂ ಪ್ರಾಸ ಬಳಕೆಯಾಗುತ್ತಿವೆ. ಉಪಮೇಯದ ಪ್ರವೃತ್ತಿ ಕಾಣುತ್ತಿದೆ. ಇದು ತಪ್ಪಲ್ಲ. ಆದರೆ ಈ ವಿಶೇಷತೆಗಳ ಬಳಕೆ ಭರದಲ್ಲಿ ನೈಜ ಉದ್ದೇಶ ಮರೆಯಾಗಬಾರದು. ಜಗಕೆ ಒಳ್ಳೆಯವನಾದರೇನು ತಂದೆ-ತಾಯಿಗಳಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಕೆಲವು ಮಾರ್ಮಿಕ ಮಾತುಗಳಿವೆ. ಇದಲ್ಲದೇ ಇತ್ತೀಚಿನ ಹೆಣ್ಣು ಮಕ್ಕಳ ನಡವಳಿಕೆ ಬಗ್ಗೆಯೂ ವಿಶ್ಲೇಷಣೆ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆಗೋಪಾಲ್, ಕಾರ್ಯದರ್ಶಿ ಲತಾ ಮೋಹನ್, ವಕೀಲ ನಾರಾಯಣಗೌಡ, ಸರ್ಕಾರಿ ನೌಕರರ ಸಂಘದ ಮಾಜಿ ಗೌರವ ಅಧ್ಯಕ್ಷ ಓಬಯ್ಯ, ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಅಧ್ಯಕ್ಷ ಎಂ.ವಿ.ಪ್ರಭುಸ್ವಾಮಿ, ಲೇಖಕಿ ಕೆ.ಲೀಲಾಪ್ರಕಾಶ್, ಆಯೋಜಕರಾದ ಮಹೇಶ, ಸುರೇಂದ್ರ ಡಿ. ಗೌಡ, ನಾಗನಾಯಕ, ಬಂಕ್ ಚೆಲುವರಾಜು, ಪ್ರಕಾಶ್‌ಬಾಬು ಇತರರು ಇದ್ದರು.