ಕಾವ್ಯ ಎಂಬುದು ದೊಡ್ಡ ಹುಡುಕಾಟ: ಸಾಹಿತಿ ಎಚ್.ಆರ್.ಸುಜಾತಾ ಅಭಿಮತ

mysore
Published on

ಮೈಸೂರು: ಸಮತಾ ಅಧ್ಯಯನ ಕೇಂದ್ರ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಕಾವ್ಯ ಮತ್ತು ಪ್ರಬಂಧ ಕಮ್ಮಟ ಕಾರ್ಯಕ್ರಮ ಸಾಹಿತ್ಯ ಮಂಥನಕ್ಕೆ ವೇದಿಕೆಯಾಯಿತು


ಡಾ.ವಿಜಯಾ ದಬ್ಬೆ ಸ್ಮರಣಾರ್ಥ ನಡೆಸಿದ ಕಾವ್ಯ ಮತ್ತು ಪ್ರಬಂಧ ಸ್ಪರ್ಧೆಗಳ ಬಹುಮಾನ ವಿಜೇತರಿಗಾಗಿ ಸರಸ್ವತಿಪುರಂನ ಯೂತ್ ಹಾಸ್ಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಕಾವ್ಯ, ಪ್ರಬಂಧ, ಸಾಹಿತ್ಯ, ಬರಹದ ಕುರಿತು ವಿಷಯ ಮಂಡಿಸಿ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟರು.


ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಯುವ ಬರಹಗಾರರು, ತಮ್ಮೊಳಗಿನ ಪ್ರಶ್ನೆಗಳು ಮುಂದಿಟ್ಟು ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರ ಪಡೆದುಕೊಂಡರು. ಕಾವ್ಯ, ಕಥೆ, ಕಾದಂಬರಿ ರಚನೆಯ ಕುರಿತು ಚರ್ಚೆಗಳು ನಡೆದವು. ಸಾಹಿತ್ಯದ ವಿವಿಧ ಆಯಾಮ ಬಗ್ಗೆಯೂ ಸಂವಾದ ಏರ್ಪಟ್ಟಿತ್ತು.


ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಎಚ್.ಆರ್.ಸುಜಾತಾ, ಕಾವ್ಯ ಎಂಬುದು ದೊಡ್ಡ ಹುಡುಕಾಟ. ತಿದ್ದಿ, ತೀಡಿ ಕವಿತೆಗಳನ್ನು ಬರೆದರೂ ಕವಿಗಳಿಗೆ ಅದು ತೃಪ್ತಿಕರವಾಗುವುದಿಲ್ಲ. ಇನ್ನಷ್ಟು ಸೊಗಸಾಗಿ ಬರೆಯಬಹುದಿತ್ತು ಎಂಬ ಭಾವ ಇರುತ್ತದೆ. ಬರೆದ ಕವಿತೆ ಸರಿ ಇದೆಯೋ.. ಇಲ್ಲವೋ ಎಂಬ ಗೊಂದಲವೂ ಇರುತ್ತದೆ. ಅಂತಿಮವಾಗಿ ಕವಿಗೆ ಸರಿ ಅನಿಸಿದಾಗ ಓದುಗರಿಗೂ ಉತ್ತಮ ಕಾವ್ಯ ದೊರೆಯುತ್ತದೆ ಎಂದರು.


ಲೇಖಕಿ ಮೌಲ್ಯಾ ಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜಿನ ಡೀನ್ ಡಾ.ಶಶಿಕಲಾ ಗುರುಪುರ, ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ.ಸಬಿಹಾ ಭೂಮಿಗೌಡ, ಕಾರ್ಯದರ್ಶಿ ಡಾ.ಆರ್.ಸುನಂದಮ್ಮ, ಉಪಾಧ್ಯಕ್ಷೆ ಬಿ.ಸಿ.ಮಂಜುಳಾ, ಖಜಾಂಚಿ ವಿಜಯಾರಾವ್, ಸಹ ಕಾರ್ಯದರ್ಶಿ ಪಿ.ಓಂಕಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net